ಮೈಸೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ ಗುರುತಿಸಿದ ಹಿರಣ್ಮಯಿ ಪ್ರತಿಷ್ಠಾನ

Hiranmayi Foundation recognizes the achievements of government school students
Published on

ಮೈಸೂರು: ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ ಎಂಬಂತೆ ವಿದ್ಯೆ ಎಂಬುದು ಕತ್ತಲಿನಿಂದ ಬೆಳಕಿನತ್ತ ಕರೆದೊಯ್ಯುವ ಜ್ಞಾನ ಜ್ಯೋತಿ ಎಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.

ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ವತಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನಗರದ ವಿವಿಧ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ನಗರದ ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣವು ಶಾಶ್ವತವಾದ ಒಂದು ಅಮೂಲ್ಯ ಸಂಪತ್ತಾಗಿದೆ. ಶಿಕ್ಷಣ ಎನ್ನುವುದು ಸರ್ವರ ಪಾಲಿನ ಸಂಜೀವಿನಿ ಆಗಿರುವುದರಿಂದ ಎಂತಹ ಕಷ್ಟವಿದ್ದರೂ ಶಿಕ್ಷಣದಿಂದ ಯಾರೂ ದೂರವಾಗಬಾರದು. ಉತ್ತಮ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ವಿದ್ಯಾರ್ಥಿ ದಿಸೆಯಲ್ಲಿಯೇ ವಿದ್ಯೆಯ ಮಹತ್ವ ಅರಿತು ಉನ್ನತ ಶಿಕ್ಷಣ ಪಡೆಯುವತ್ತ ಮುನ್ನಡೆಯಬೇಕು ಎಂದರು.

ಇಂದು ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆಯಿಲ್ಲ. ಗುಣಮಟ್ಟದ ಶಿಕ್ಷಣದಲ್ಲಿ ಸರ್ಕಾರಿ ಶಾಲೆಗಳೇ ಮುಂದಿದ್ದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಫಲಿತಾಂಶ ಇದನ್ನು ಸಾಬೀತು ಪಡಿಸಿದೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಸೀಟು ಸಿಗದಂತಹ ಪರಿಸ್ಥಿತಿ ಇದೆ. ಇದು ಉತ್ತಮ ಬೆಳವಣಿಗೆಯಾಗಿದ್ದು ಎಂದು ಹೇಳಿದರು.

ಮುಂದಿನ ವಿದ್ಯಾಭ್ಯಾಸದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಅಂಕಗಳು ಬೇಕು ನಿಜ. ಆದರೆ ಅಂಕಗಳೇ ಜೀವನವಲ್ಲ. ಹಾಗಾಗಿ ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಲೇ ಅಂಕಗಳ ಜತೆಗೇ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂಸ್ಕೃತಿ ಚಿಂತಕ ಡಾ.ಕೆ.ರಘುರಾಮ್ ವಾಜಪೇಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿ ವಿದ್ಯಾರ್ಥಿ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಭಾವಂತರೇ ಆಗಿರುತ್ತಾರೆ. ಕೆಲವರು ಪಠ್ಯದಲ್ಲಿ ಮುಂದಿದ್ದರೆ ಮತ್ತೆ ಕೆಲವರು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮದೇ ಆದ ವಿಶಿಷ್ಟ ಪ್ರತಿಭೆಯಿಂದ ಮುಂದಿರುತ್ತಾರೆ. ಹಾಗಾಗಿ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ನಮ್ಮ ಸಮಾಜದ ಕರ್ತವ್ಯವಾಗಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ ಒಂಟಿಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯ ಮಹಾದೇವಿ ಮತ್ತು ಸೌಭಾಗ್ಯ, ವಿನಾಯಕನಗರದ ವಿವೇಕಾನಂದ ಪ್ರೌಢಶಾಲೆಯ ಚಂದನ್, ಮಂಚೇಗೌಡನಕೊಪ್ಪಲು ಪ್ರೌಢಶಾಲೆಯ ಹರ್ಷ, ಮೇದರ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಆರ್. ರಚನಾ, ಕೈಲಾಸಪುರಂ ಸರ್ಕಾರಿ ಪ್ರೌಢಶಾಲೆಯ ಜ್ಯೋತಿ ವಿಶ್ವಕರ್ಮ, ಎನ್.ಆರ್. ಮೊಹಲ್ಲಾ ಸರ್ಕಾರಿ ಪ್ರೌಢಶಾಲೆಯ ಚಿರಾಗ್, ಬನ್ನಿಮಂಟಪ ಸರ್ಕಾರಿ ಪ್ರೌಢಶಾಲೆಯ ನೇತ್ರಾವತಿ, ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಅರ್ಜುನ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಮುಖ್ಯ ಶಿಕ್ಷಕ ಕೆ.ಜಿ.ಮಹೇಶ್, ಶಿಕ್ಷಕ ಡಾ.ಎಸ್. ವಿಜಿ, ದೈಹಿಕ ಶಿಕ್ಷಣದ ವಿಶೇಷಾಧಿಕಾರಿ ವೆಂಕಟೇಶ್, ಮಂಚೇಗೌಡನಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಕೆ.ಎನ್. ಕಲ್ಪನಾ, ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗವೇಣಿ, ಪ್ರೌಢಶಾಲಾ ಶಿಕ್ಷಕರಾದ ಬಸವರಾಜು, ಎಸ್.ನಂಜುಂಡನಾಯಕ, ಭಾರತಿ ಎಸ್. ಶಾಸ್ತ್ರಿ, ಎ.ತಾರಾ, ಲಕ್ಷ್ಮೀ, ಜಿ. ಭಟ್, ವೈ.ಪದ್ಮಾ ಹಾಗು ಪತ್ರಕರ್ತ ಕಿಶೋರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net