

ಸದೇಶ್ ಕಾರ್ಮಾಡ್ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನ ಹಲವಾರು ಪಾರಂಪರಿಕ ಕಟ್ಟಡಗಳು ಕಾಲ ಕಾಲಕ್ಕೆ ಸಂರಕ್ಷಣೆ ಕಾಣದೆ ದುಸ್ಥಿತಿಗೆ ತಲುಪಿ ಕುಸಿದು ಬೀಳುವ ಆತಂಕ ಎದುರಿಸುತ್ತಿದೆ. ಮತ್ತೊಂದೆಡೆ ಸೂಕ್ತ ರಕ್ಷಣೆ ಇಲ್ಲದೆ ಕಿಡಿಗೇಡಿಗಳು ಹಾಗೂ ಕಳ್ಳರಿಂದ ಪಾರಂಪರಿಕ ಕಟ್ಟಡಗಳು ನಿರಂತರವಾಗಿ ಅಪಾಯದ ಆತಂಕ ಎದುರಿಸುತ್ತಿವೆ.
ನಗರದ ಹೃದಯ ಭಾಗದಲ್ಲಿರುವ ಆಧುನಿಕ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯ ಮೇಲೆ ಸೋಮವಾರ ಏರಿದ ವ್ಯಕ್ತಿಯೊಬ್ಬ ಪ್ರತಿಮೆಯನ್ನು ವಿರೂಪಗೊಳಿಸಲು ಯತ್ನಿಸಿದ್ದ. ಇಂತಹ ಘಟನೆಗಳು ಇದೇ ಮೊದಲೇನು ಅಲ್ಲ. ಕೆಲವು ವರ್ಷಗಳ ಹಿಂದೆ ಚಾಮರಾಜ ಒಡೆಯರ್ ಪ್ರತಿಮೆಯ ಕತ್ತಿಯನ್ನು ಕಳವು ಮಾಡಲಾಗಿತ್ತು.
ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗ 2012ರಲ್ಲಿ ಸುರಿದ ಧಾರಾಕಾರ ಮಳೆಯಿಂದ ಕುಸಿದು ಬಿದ್ದಿತ್ತು. ನಂತರ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವರನ್ನು ಕಟ್ಟಡದ ಮುಂಭಾಗದಲ್ಲಿ ತಾತ್ಕಾಲಿಕ ಮಳಿಗೆ ನಿರ್ಮಿಸಿ ಸ್ಥಳಾಂತರಿಸಲಾಯಿತು. ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಯದ ಹಿನ್ನೆಲೆಯಲ್ಲಿ ಕಟ್ಟಡ ನಿರ್ವಹಣೆ ಇಲ್ಲದೆ ಪಾಳು ಬಿದ್ದು ಇದೀಗ ಸಂಪೂರ್ಣ ದುಸ್ಥಿತಿಯತ್ತ ಮುಖ ಮಾಡುತ್ತಿದೆ. ಈ ಕಟ್ಟಡದ ಸಾಕಷ್ಟು ಕಿಟಿಕಿ ಹಾಗೂ ಬಾಕಿಗಿಲುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೀಗಾಗಿ ಕಟ್ಟಡ ದಿನೇ ದಿನೆ ದುರ್ಬ ಲಗೊಳ್ಳುತ್ತಿದೆ. ಇಷ್ಟಾದರೂ ಕಟ್ಟಡಕ್ಕೆ ರಕ್ಷಣೆ ನೀಡುವ ಕಾರ್ಯವನ್ನು ಸರ್ಕಾರ ಮಾಡುತ್ತಿಲ್ಲ. ಸರ್ಕಾರ ಇದೇ ರೀತಿ ನಿರ್ಲಕ್ಷೃ ಮುಂದು ವರೆಸಿದರೆ ಕಳ್ಳರೇ ಈ ಕಟ್ಟಡವನ್ನು ಕೆಡವಿ ಹಾಕುವ ದಿನಗಳು ದೂರವಿಲ್ಲ.
ನಗರದ ಸರ್ಕಾರಿ ವಸತಿ ಗೃಹಕ್ಕೆ ಸೇರಿದ ಸ್ವಾಗತ ಕಮಾನು (ಬೆಂಗಳೂರು-ಮೈಸೂರು ರಸ್ತೆ) ನಿರ್ವಹಣೆಯ ಕೊರತೆಯಿಂದ ದುಸ್ಥಿತಿಗೆ ತಲುಪಿದೆ. ಈ ಕಟ್ಟಡದ ಎಲ್ಲರ ನಿರ್ಲಕ್ಷೃಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಕೆಲವರು ಕಟ್ಟಡವನ್ನು ಕುದುರೆ ಲಾಯವಾಗಿ ಮಾರ್ಪಾಡು ಮಾಡಿಕೊಂಡಿದ್ದರು. ಈ ಕುರಿತು ‘ವಿಜಯವಾಣಿ’ ವರದಿಯ ಮೂಲಕ ಗಮನ ಸೆಳೆದ ನಂತರ ನಗರ ಪಾಲಿಕೆ ಅಧಿಕಾರಿಗಳು ಸ್ಥಳದಿಂದ ಕುದುರೆಗಳನ್ನು ತೆರವುಗೊಳಿಸಿ ಸ್ವಾಗತ ಕಮಾನು ರಕ್ಷಣೆಗೆ ಮುಂದಾಯಿತು. ಈ ಸ್ವಾಗತ ಕಮಾನಿನ ಜತೆಗೆ ಮಹಾರಾಣಿ ಕಾಲೇಜಿನ ಸ್ವಾಗತ ಕಮಾನು, ವೀರನಗೆರೆಯಲ್ಲಿರುವ ಗೋಪುರವನ್ನು ಸಂರಕ್ಷಣೆ ಮಾಡಲು ಹಾಗೂ ಲಲಿತ ಮಹಲ್ ರಸ್ತೆಯಲ್ಲಿರುವ ಗೋಪುರವನ್ನು ಸ್ಥಳಾಂತರಿಸಿ ರಸ್ತೆ ವಿಸ್ತರಣೆ ಮಾಡಲು ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಲಾಯಿತು. ಆದರೆ, ಸಂರಕ್ಷಣಾ ಕಾಮಗಾರಿ ಒಂದು ವರ್ಷವಾದರೂ ಇನ್ನೂ ಆರಂಭಗೊಂಡಿಲ್ಲ.
ದೊಡ್ಡಗಡಿಯಾರ ಗೋಪುರ ಮೈಸೂರಿನಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕಟ್ಟಡ ಇಲಿ, ಗೆದ್ದಲುಗಳ ಹಾವಳಿಯಿಂದ ಕುಸಿಯುವ ಭೀತಿ ಎದುರಾಗಿತ್ತು. ಈ ಬಗ್ಗೆ ಪಾರಂಪರಿಕ ತಜ್ಞರು ನಗರ ಪಾಲಿಕೆಯ ಗಮನ ಸೆಳೆದ ನಂತರ ನಗರ ಪಾಲಿಕೆ ದೊಡ್ಡ ಗಡಿಯಾರದ ಸಂರಕ್ಷಣಾ ಕಾರ್ಯ ಕೈಗೊಂಡಿರುವುದು ಸಂತಸದ ವಿಚಾರ. ಆದರೆ, ಈ ದೊಡ್ಡಗಡಿಯಾರ ಸಹ ಕಳ್ಳರಿಂದ ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗೆ ಕಳ್ಳರು ದೊಡ್ಡಗಡಿಯಾರ ಗೋಪುರದ ಅರ್ಥಿಂಗ್ ವಯರ್‌ಅನ್ನು ಕಳವು ಮಾಡಿದ್ದರು.
ನಗರದ ಹೃದಯ ಭಾಗದಲ್ಲಿ ಇರುವ ಪಾರಂಪರಿಕ ಕಟ್ಟಡಗಳಲ್ಲಿಯೇ ಈ ರೀತಿ ನಿರಂತರವಾಗಿ ಕಳವು ನಡೆಯುತ್ತಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಗಮನ ಹರಿಸದೆ ಇರುವುದು ಅಚ್ಚರಿಯ ಸಂಗತಿ. ನಗರದಲ್ಲಿ ಹೆಜ್ಜೆ ಹೆಜ್ಜೆಗೂ ಸಿಸಿ ಕ್ಯಾಮರಾಗಳು ಇದ್ದರೂ ಕಳ್ಳರು ಪಾರಂಪರಿ ಕಟ್ಟಡಗಳಲ್ಲಿ ಯಾವ ರೀತಿ ಕಳವು ಮಾಡುತ್ತಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನಗರದ ಎಲ್ಲ ಪಾರಂಪರಿಕ ಕಟ್ಟಡಗಳಿಗೆ ರಕ್ಷಣೆ ಒದಗಿಸುವುದು ಕಷ್ಟದ ಕೆಲಸ. ಆದರೆ, ನಗರದ ಹೃದಯ ಭಾಗದಲ್ಲಿ ಇರುವ ಪಾರಂಪರಿಕ ಕಟ್ಟಡಗಳಿಗಾದರೂ ರಕ್ಷಣೆ ನೀಡುವ ಅವಶ್ಯಕತೆ ಇದೆ. ಉಳಿದ ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಜಿಲ್ಲಾಡಳಿತ, ನಗರ ಪಾಲಿಕೆ ಕ್ರಮ ವಹಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರದ ಪಾರಂಪರಿಕ ಕಟ್ಟಡಗಳನ್ನು ಫೋಟೋಗಳಲ್ಲಿ ಮಾತ್ರ ನೋಡಲು ಸಾಧ್ಯ.
ನಗರದ ಹಲವಾರು ಪಾರಂಪರಿಕ ಕಟ್ಟಡಗಳಿಗೆ ಸೂಕ್ತ ರಕ್ಷಣೆ ಇಲ್ಲದ ಹಿನ್ನೆಲೆಯಲ್ಲಿ ಕಳವು ಪ್ರಕರಣ ಹಾಗೂ ಕಟ್ಟಡಗಳನ್ನು ವಿರೂಪಗೊ ಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ಹಿಂದೆ ಚಾಮರಾಜ ಒಡೆಯರ್ ಪ್ರತಿಮೆಯ ಕತ್ತಿ ಕಳವು ಮಾಡಲಾಗಿತ್ತು. ಇದೀಗ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ವಿರೂಪಗೊಳಿಸಲು ಯತ್ನಿಸಲಾಗಿದೆ. ನಗರ ಪಾಲಿಕೆ ಅಧಿಕಾರಿಗಳು ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ವಹಿಸಬೇಕು. ಈ ಬಗ್ಗೆ ನಗರ ಪಾಲಿಕೆಯ ಅಧಿಕಾರಿಗಳ ಗಮನ ಸೆಳೆಯಲಾಗುವುದು.
ಪ್ರೊ.ಎನ್.ಎಸ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ