

ಮೈಸೂರು: ಜಗತ್ತು ವೇಗವಾಗಿ ಬದಲಾಗುತ್ತಿದ್ದು, ನಾವಿಂದು ಎಐ ತಂತ್ರಜ್ಞಾನದ (ಕೃತಕ ಬುದ್ಧಿಮತ್ತೆ) ಯುಗದಲ್ಲಿ ಬದುಕು ನಡೆಸುತ್ತಿದ್ದೇವೆ. ಇಂತಹ ಯುಗದಲ್ಲಿ ಯಶಸ್ಸು ಗಳಿಸಬೇಕಾದರೆ ನಿರಂತರ ಅಧ್ಯಯನ ಹಾಗೂ ಪ್ರಯತ್ನ ಅಗತ್ಯ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ. ಚಂದ್ರಶೇಖರ ಅಭಿಪ್ರಾಯಪಟ್ಟರು.
ನಗರದ ಬನ್ನಿಮಂಟಪದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ 426 ವಿದ್ಯಾರ್ಥಿಗಳಗೆ ಪದವಿ ಪ್ರದಾನ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಇಲ್ಲಿಗೆ ಮುಕ್ತಾಯಗೊಳಿಸಬಾರದು. ಜೀವನದ ಉದ್ದಕ್ಕೂ ಹೊಸ ವಿಚಾರಗಳನ್ನು ಕಲಿಯುತ್ತಾ ಹೋಗಬೇಕು. ಹಾಗಿದ್ದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಪಠ್ಯಪುಸ್ತಕದಿಂದ ದೊರೆತ ಜ್ಞಾನಕ್ಕೆ ಮಾತ್ರ ನೀವು ಸೀಮಿತರಾಗಬೇಡಿ. ಅದರಾಚೆಗಿನ ಜ್ಞಾನವನ್ನು ನೀವು ಹುಡುಕಬೇಕು. ಕಾಲೇಜಿನಲ್ಲಿ ದೊರೆಯುವ ಅಂಕಪಟ್ಟಿಯೊಂದರಿಂದಲೇ ನಿಮಗೆ ಉದ್ಯೋಗ ದೊರೆಯುವುದಿಲ್ಲ. ಉದ್ಯೋಗ ಪಡೆಯಲು ನಿಮ್ಮಲ್ಲಿ ಕೌಶಲದ ಅವಶ್ಯಕತೆ ಇದೆ. ವಿದ್ಯೆಯ ಜತೆಗೆ ಕೌಶಲವನ್ನು ಸಹ ಸಂಪಾದಿಸಬೇಕು. ಕೇವಲ ವಿದ್ಯೆ ಹಾಗೂ ಕೌಶಲದಿಂದ ಮಾತ್ರ ನೀವು ಯಶಸ್ವಿ ವ್ಯಕ್ತಿಯಾಗಲು ಸಾಧ್ಯವಾಗಲು ಸಾಧ್ಯವಿಲ್ಲ. ಇದರ ಜತೆಗೆ ಉತ್ತಮ ನಡವಳಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಂತ್ರಜ್ಞಾನದ ಬೆಳವಣಿಗೆಯಿಂದ ಪ್ರಸ್ತುತ ಮಾಹಿತಿಯು ಬೆರಳ ತುದಿಯಲ್ಲಿಯೇ ದೊರೆಯುತ್ತದೆ. ಆದರೆ, ನಮಗೆ ದೊರೆಯುವ ಮಾಹಿತಿಯನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳಬೇಕು. ನಮ್ಮ ಎದುರು ಇರುವ ಸವಾಲುಗಳನ್ನು ಎದುರಿಸಲು ನಾವು ಹೊಸ ಜ್ಞಾನವನ್ನು ಸಂಪಾದಿಸಬೇಕು. ಪ್ರಸ್ತುತ ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಸ್ಪರ್ಧೆ ಇದ್ದು, ಸ್ಪರ್ಧೆಯನ್ನು ಎದುರಿಸಲು ಸಜ್ಜಾಗಬೇಕು ಎಂದರು.
ಜ್ಞಾನ ಎಂಬುದು ಶಕ್ತಿ ಇದ್ದಂತೆ. ಜ್ಞಾನ ಇದ್ದರೆ ಜಗತ್ತನ್ನು ಆಳಬಹುದು. ಹಾಗಾಗಿ ಜ್ಞಾನವನ್ನು ಸಂಪಾದಿಸಲು ನಿಮ್ಮಲ್ಲಿ ಸದಾ ತೆರೆದ ಮನಸ್ಸು ಇರಬೇಕು. ನಿಮಗೆ ನೀವೇ ಮಿತಿ ಹೇರಿಕೊಳ್ಳಬೇಡಿ. ನಿಮ್ಮ ಮಿತಿ ಆಕಾಶವಾಗಿರಲಿ, ಸಾಧಿಸಲು ಅಷ್ಟೊಂದು ಅವಕಾಶಗಳು ಇವೆ. ಜಗತ್ತಿನಲ್ಲಿ ಸಾಕಷ್ಟು ಅವಕಾಶಗಳು ಇದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿ. ಒಂದು ಬಾರಿ ನೀವು ಮಾಡುವ ಪ್ರಯತ್ನದಲ್ಲಿ ಯಶಸ್ಸು ದೊರೆಯದೆ ಹೋದರೆ ನಿರಾಶರಾಗುವ ಅವಶ್ಯಕತೆ ಇಲ್ಲ, ಮರಳಿ ಮತ್ತೆ ಯತ್ನಿಸಿ. ನಿರಂತರ ಪ್ರಯತ್ನದಿಂದ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸಂತ ಫಿಲೋಮಿನಾ ವಿದ್ಯಾಸಂಸ್ಥೆಗಳ ರೆಕ್ಟರ್ ಡಾ.ಲೂರ್ದ್ ಪ್ರಸಾದ್ ಜೋಸೆಫ್, ಪ್ರಾಂಶುಪಾಲ ಡಾ.ರವಿ ಜೆ.ಡಿ. ಸಲ್ಡಾನ್ಹ ಹಾಗೂ ವಿವಿಧ ವಿಭಾಗಗಳ ಡೀನ್ ಇದ್ದರು.