

ಮಂಜುನಾಥ ಟಿ.ಭೋವಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರು ನಗರ ಅನೇಕ ವೈವಿಧ್ಯತೆಗಳ ಖಜಾನೆ. ಇಲ್ಲಿಯ ರಾಜಯೋಗ್ಯ ಮಹಲುಗಳು, ಮನಮೋಹಕ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳು, ಪುರಾತತ್ವ ನೆಲಗಳು, ರಾಜಬೀದಿಗಳು ಒಂದೊಂದು ಕಥೆ ಹೇಳುತ್ತವೆ. ಅದೇ ರೀತಿ ಇಲ್ಲಿಯ ಹಳೇ ಶಾಲೆಗಳೂ ಚರಿತ್ರೆಯನ್ನು ಸಾರುತ್ತವೆ. ಅದಕ್ಕೊಂದು ಉದಾಹರಣೆ ಕೆ.ಆರ್.ಮೊಹಲ್ಲಾದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ.
ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಮಹಾರಾಜ, ಮಹಾರಾಣಿ ವಿದ್ಯಾಸಂಸ್ಥೆಗಳು ಮೈಸೂರಿನ ರಾಜಾಶ್ರಯದಲ್ಲಿ ಬೆಳೆದು ಇದೀಗ ಹೆಮ್ಮರವಾಗಿ ವಿಸ್ತಾರಗೊಂಡಿವೆ. ಅದೇ ರೀತಿ ಟಿಪ್ಪು ಸುಲ್ತಾನರ ವಂಶಸ್ಥರು ಕೂಡ ಈ ಉರ್ದು ಶಾಲೆಯನ್ನು ತೆರೆಯುವ ಮೂಲಕ ಮುಸ್ಲಿಂ ಮಕ್ಕಳ ಶಿಕ್ಷಣ ಕಲಿಕೆಗೆ ನೆರವಾದರು. ಆದರೆ, ಸರ್ಕಾರ, ಶಿಕ್ಷಣ ಇಲಾಖೆಯ ನಿರೀಕ್ಷಿತ ಮಟ್ಟದಲ್ಲಿ ನೆರವು ಮತ್ತು ಸಹಕಾರ ದೊರೆಯದ ಕಾರಣಕ್ಕೆ ಮಹಾರಾಜ, ಮಹಾರಾಣಿ ಶಾಲೆಯಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಹೀಗಾಗಿ, ಇದರ ಕಟ್ಟಡ, ಶಾಲೆಯೂ ವಿಸ್ತರಣೆಯಾಗಿಲ್ಲ ಎಂಬುದು ಬೇಸರದ ಸಂಗತಿ. 91 ವರ್ಷ ಪೂರೈಸಿ ಶತಮಾನೋತ್ಸವದ ಹೆಜ್ಜೆ ಹಾಕುತ್ತಿರುವ ಈ ಜ್ಞಾನದೇಗುಲವನ್ನು ಸಂರಕ್ಷಿಸಿಕೊಂಡು ಹೋಗುವ ಮೂಲಕ ಉರ್ದು ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಬೇಕಿದೆ.
1930ರಲ್ಲಿ ಸ್ಥಾಪನೆ:
ಮಹಾರಾಜ ಟಿಪ್ಪು ಸುಲ್ತಾನ್‌ರ ವಂಶಸ್ಥರಾದ ಅಲಿಖಾನ್ ಸಹೋದರರು ಈ ಶಾಲೆಯ ಸಂಸ್ಥಾಪಕರು. ಈಗಿರುವ ಕಟ್ಟಡ ಈ ಹಿಂದೆ ಬೇಸಿಗೆ ಅರಮನೆಯಾಗಿತ್ತು. ಶಾಲೆಗಾಗಿ ಇದನ್ನು ಬಿಟ್ಟುಕೊಟ್ಟಿದ್ದರು. ಹೀಗಾಗಿ, 1930ರಲ್ಲಿ ಸ್ಥಾಪನೆಯಾದ ಇದು ಈಗಲೂ ಶಿಕ್ಷಣ ಸೇವಾ ಕಾರ್ಯವನ್ನು ಮುನ್ನಡೆಸುತ್ತಿದೆ. ಇಲ್ಲಿ ಕಲಿತ ನೂರಾರು ಮುಸ್ಲಿಂ ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡಿದ್ದು, ನ್ಯಾಯಾಧೀಶರಾಗಿ, ವಕೀಲರಾಗಿ, ಶಿಕ್ಷಕರಾಗಿ, ಉಪನ್ಯಾಸಕರಾಗಿ ಸೇರಿ ವಿವಿಧ ಹುದ್ದೆಗಳಿಗೇರಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ದುಬೈ ಸೇರಿ ವಿದೇಶದಲ್ಲೂ ಹಂಚಿಹೋಗಿದ್ದು, ಇದು ಈ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ.
ಅಭಿವೃದ್ಧಿ ಕೆಲಸಕ್ಕೆ ದಾನಿಗಳೇ ಆಸರೆ:
ಈ ಶಾಲೆಯ ಪುಟ್ಟಕಟ್ಟಡ ಸರ್ಕಾರಕ್ಕೆ ಸೇರಿಲ್ಲ. ಹೀಗಾಗಿ, ಸ್ಕೂಲ್ ಅಭಿವೃದ್ಧಿಗೆ ಅನುದಾನ ಬರಲ್ಲ. ದುರಸ್ತಿ, ಸುಣ್ಣಬಣ್ಣ ಬಳಿಯಲು ಇನ್ನಿತರ ಸಿವಿಲ್ ಕೆಲಸಗಳಿಗೆ ದಾನಿಗಳನ್ನೇ ಆಶ್ರಯಿಸಬೇಕಾಗಿದೆ. ಉಳಿದಂತೆ ಬಿಸಿಯೂಟ, ಪಠ್ಯಪುಸ್ತಕಗಳು, ಸಮವಸ್ತ್ರ ಇನ್ನಿತರ ಸರ್ಕಾರಿ ಸೌಲಭ್ಯಗಳು ಮಾತ್ರ ದೊರೆಯುತ್ತಿವೆ.
ಮಕ್ಕಳ ಸಂಖ್ಯೆ ಇಳಿಕೆ:
ಸರ್ಕಾರಿ ಕನ್ನಡ ಶಾಲೆಯಂತೆಯೇ ಈ ಸ್ಕೂಲ್ ಕೂಡ ಮಕ್ಕಳ ಕೊರತೆಯಿಂದ ಸೊರಗುತ್ತಿದೆ. ಇಲ್ಲಿ ಬರೀ 30 ಮಕ್ಕಳಿದ್ದಾರೆ. 1ರಿಂದ 7ನೇ ತರಗತಿವರೆಗೆ ಕ್ರಮವಾಗಿ 8, 6, 4, 2, 4, 3, 3 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಯಾವ ಕ್ಲಾಸ್‌ನಲ್ಲೂ ಮಕ್ಕಳ ಸಂಖ್ಯೆ 10ರ ಗಡಿ ದಾಟಿಲ್ಲ. ಇದಕ್ಕೆ ಪಾಲಕರಲ್ಲಿರುವ ಇಂಗ್ಲಿಷ್ ವ್ಯಾಮೋಹ ಕಾರಣವಾಗಿದೆ. ಈ ಹಿಂದೆ ಇದೇ ಶಾಲೆಯಲ್ಲಿ 400 ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ಕಾಲಕ್ರಮೇಣ ಈ ಸಂಖ್ಯೆ ಇಳಿದು 9ಕ್ಕೆ ಬಂದು ನಿಂತಿತ್ತು. ಮುಸ್ಲಿಂ ಸಮುದಾಯದವರ ಮನೆಗಳಿಗೆ ಹೋಗಿ ಪ್ರಚಾರ ಮಾಡಿದ್ದರಿಂದ 30 ಮಕ್ಕಳು ಇಲ್ಲಿಗೆ ಬರುವಂತಾಗಿದೆ.
ಶಿಕ್ಷಕರಿಂದಲೇ ಆಟೋ ವ್ಯವಸ್ಥೆ:
ಮಕ್ಕಳನ್ನು ಆಕರ್ಷಿಸಲು ಆಟೋರಿಕ್ಷಾ ವ್ಯವಸ್ಥೆ ಮಾಡಲಾಗಿದೆ. ಇಲ್ಲಿರುವ ಇಬ್ಬರು ಶಿಕ್ಷಕರು ಇದಕ್ಕಾಗಿ ಪ್ರತಿ ತಿಂಗಳು 3 ಸಾವಿರ ರೂ. ವಿನಿಯೋಗಿಸುತ್ತಿದ್ದು, ಇಲ್ಲಿಗೆ ಕಾಕರವಾಡಿ ಪ್ರದೇಶದಿಂದ ಮಕ್ಕಳು ಬರುತ್ತಾರೆ. ಅವರನ್ನು ಮನೆಯಿಂದ ಕರೆತಂದು, ಬಳಿಕ ಸಂಜೆ ಮನೆಗೆ ಕಳುಹಿಸಿಕೊಡಲಾಗುತ್ತಿದೆ. ಜತೆಗೆ, ಸ್ವಂತ ಹಣದಿಂದ ಬುಕ್, ಬ್ಯಾಗ್, ಇನ್ನಿತರ ಸಾಮಗ್ರಿಯನ್ನೂ ಕೊಡಿಸಲಾಗುತ್ತಿದೆ. ಈ ಮೂಲಕ ಪಾಲಕರಲ್ಲಿ ಮತ್ತು ಮಕ್ಕಳಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದು, ಖಾಸಗಿ ಶಾಲೆಯಿಂದ ಬಂದ ಕೆಲ ಮಕ್ಕಳು ಪ್ರವೇಶ ಪಡೆದಿದ್ದಾರೆ.
ಆಂಗ್ಲ ಮಾಧ್ಯಮವಾಗಿ ಪರಿವರ್ತಿಸಿ:
ಹಳೇ ವಿದ್ಯಾರ್ಥಿಗಳ ಸಂಘ ಈ ಶಾಲೆಯ ಉಳಿವಿಗೆ ಶ್ರಮಿಸುತ್ತಿದೆ. ಸ್ಕೂಲ್‌ನ ಅಗತ್ಯತೆಗಳನ್ನು ಪೂರೈಸುತ್ತಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಆದರೆ, ಮುಸ್ಲಿಂ ಪಾಲಕರಲ್ಲೂ ಉರ್ದು ಮಾಧ್ಯಮ ಕಲಿಕೆ ಬೇಡವಾಗಿದ್ದು, ಕಾನ್ವೆಂಟ್ ಸ್ಕೂಲ್‌ಗೆ ತಮ್ಮ ಮಕ್ಕಳನ್ನು ಕಳುಹಿಸಲು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ, ಈ ಅಭಿರುಚಿಗೆ ತಕ್ಕಂತೆ ಇಲ್ಲಿಯ 5, 6, 7ನೇ ತರಗತಿಯನ್ನು ಆಂಗ್ಲ ಮಾಧ್ಯಮವಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಶಿಕ್ಷಣ ಇಲಾಖೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.
ಇಂಗ್ಲಿಷ್, ಕನ್ನಡದಲ್ಲೂ ಬೋಧನೆ:
ಇದು ಉರ್ದು ಮಾಧ್ಯಮ ಶಾಲೆ ಆಗಿದ್ದರೂ ಇಂಗ್ಲಿಷ್ ಬಳಕೆ ಹೆಚ್ಚು. ಜತೆಗೆ, ಕನ್ನಡ ಭಾಷೆಯಲ್ಲೂ ಹೇಳಿಕೊಡಲಾಗುತ್ತದೆ. ಹೀಗಾಗಿ, ಮೂರು ಭಾಷೆಯ ಮೇಲೆ ಮಕ್ಕಳು ಹಿಡಿತ ಹೊಂದಿದ್ದಾರೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯವಾಗಿ ಕ್ರಮವಾಗಿ ಉರ್ದು, ಕನ್ನಡ ಮತ್ತು ಇಂಗ್ಲಿಷ್ ಕಲಿಸುತ್ತಿದ್ದು, ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನ ವಿಷಯವನ್ನು ಉರ್ದುವಿನಲ್ಲಿ ಕಲಿಸಲಾಗುತ್ತದೆ. ಬೋಧನೆಯಲ್ಲಿ ಇಂಗ್ಲಿಷ್‌ಗೆ ಒತ್ತು ನೀಡಿರುವುದರಿಂದ ಇಲ್ಲಿಂದ ತೇರ್ಗಡೆಯಾದ ಮಕ್ಕಳು ಮುಂದೆ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಗೆ ಸೇರಲು ಅನುಕೂಲವಾಗುತ್ತದೆ. ಜತೆಗೆ ಅವರ ಕಲಿಕೆಯನ್ನು ಮುಂದುವರಿಸಲು ಸುಲಲಿತವಾಗಿದೆ ಎನ್ನುತ್ತಾರೆ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸೈಯದ್ ನೂರಾನಿ ಜಬೀನ್ ಅವರು.
ಹೆಸರಿಗೆ ಮಾತ್ರ ಬಾಲಕರ ಸ್ಕೂಲ್:
ಇದು ಹೆಸರಿಗೆ ಮಾತ್ರ ಬಾಲಕರ ಶಾಲೆ. ಆದರಿಲ್ಲಿ ಬಾಲಕರು ಮತ್ತು ಬಾಲಕಿಯರು ಒಟ್ಟಿಗೆ ಕಲಿಯುತ್ತಾರೆ. ಸರ್ಕಾರಿ ದಾಖಲೆಯಲ್ಲಿ ಮಾತ್ರ ಬಾಲಕರ ಶಾಲೆ ಎಂದು ನಮೂದಾಗಿದೆ. ಅದು ಹಾಗೆ ಮುಂದುವರಿದುಕೊಂಡು ಬಂದಿದೆ.
ಈ ಶಾಲೆಗೆ ಮೈದಾನ ಇಲ್ಲ. ಇದೊಂದೇ ಕೊರತೆ ಇಲ್ಲ. ಇಲ್ಲಿಯ ಪಾರಂಪರಿಕ ಕಟ್ಟಡ ಸುಸ್ಥಿತಿಯಲ್ಲಿ ಇದೆ. ಕಾಲಕ್ಕೆ ತಕ್ಕಂತೆ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದು, ಉಳಿದಂತೆ ಕಂಪ್ಯೂಟರ್ ಸೇರಿದಂತೆ ಇನ್ನಿತರ ಸೌಲಭ್ಯಗಳು ಇವೆ. ಆದರೆ, ಬಹಳಷ್ಟ ಶ್ರಮ ವಹಿಸಿದ್ದರೂ ಮಕ್ಕಳ ಪ್ರವೇಶಾತಿ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗುತ್ತಿಲ್ಲ.
ಸೈಯದ್ ನೂರಾನಿ ಜಬೀನ್, ಪ್ರಭಾರ ಮುಖ್ಯಶಿಕ್ಷಕಿ ಉರ್ದು ಶಾಲೆ
ಶಿಕ್ಷಣ ಕುರಿತು ದೂರದೃಷ್ಟಿ ಇಟ್ಟುಕೊಂಡು ಟಿಪ್ಪು ಸುಲ್ತಾನರ ವಂಶಸ್ಥರು ಸ್ಥಾಪಿಸಿರುವ ಈ ಶಾಲೆಯನ್ನು ಮುಚ್ಚಿಸಲು ಕೆಲವರು ಬಹಳ ಪ್ರಯತ್ನಿಸಿದ್ದರು. ಆದರೆ, ಇದಕ್ಕೆ ಅವಕಾಶ ಕೊಡದೆ ಉಳಿಸಿಕೊಂಡು ಹೋಗಲು ಬಹಳಷ್ಟು ಶ್ರಮಿಸಲಾಗಿದೆ. ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಿದೆ. ಅದಕ್ಕೆ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ನೆರವು ನೀಡಬೇಕು.
ನವಾಬ್‌ಮೀರ್ ಮೊಹಿದ್ದೀನ್ ಅಲಿಖಾನ್, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ