

ಮಂಜುನಾಥ ಟಿ.ಭೋವಿ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರು ಶಿಕ್ಷಣ ಕಣಜ. ಜ್ಞಾನದೇಗುಲದ ಮಹತ್ವ ಅರಿತು ಇಲ್ಲಿಯ ರಾಜ ಮಹಾರಾಜರು ಶಿಕ್ಷಣ ಕಾಂತ್ರಿಗೆ ಮುನ್ನುಡಿ ಬರೆದರು. ಅವರ ಪ್ರೋತ್ಸಾಹದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯ ಚರಿತ್ರೆ ಈಗಲೂ ನಮ್ಮ ಕಣ್ಣಮುಂದಿದೆ. ಆ ಕಾಲದಲ್ಲೇ ಹೆಣ್ಣು ಮಕ್ಕಳಿಗಾಗಿ ಮಹಾರಾಣಿ, ಗಂಡುಮಕ್ಕಳಿಗೆ ಮಹಾರಾಜ ಶಾಲೆ ತೆರೆದು ಸಾಮಾನ್ಯರಿಗೂ ಶಿಕ್ಷಣ ಕಲ್ಪಿಸಲಾಗಿತ್ತು. ಅಂತೆಯೆ, ಅಂಧ ಮಕ್ಕಳಿಗಾಗಿ ಪ್ರಾರಂಭಿಸಿದ ಶಾಲೆ ಈಗ 120 ವರ್ಷ ಪೂರೈಸಿ ಹೆಮ್ಮರವಾಗಿ ಬೆಳೆದಿದೆ. ಕಣ್ಣಿಲ್ಲದವರಿಗೆ ಜ್ಞಾನಾರ್ಜನೆಯ ಮಹಾದ್ವಾರ ತೆರೆದು ಅವರ ಬಾಳಿಗೆ ಬೆಳಕಾಗಿದೆ. ಇದು ತಿಲಕನಗರದ ಅಂಧರ ಸರ್ಕಾರಿ ಪಾಠಶಾಲೆಯ ಹಿರಿಮೆ...!
ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸೇರಿದ ಈ ಶಾಲೆ ಸದ್ದಿಲ್ಲದೆ ಸಾಧನೆ ಮಾಡಿದೆ. ಆದರೀಗ ಕಾಲಕ್ಕೆ ತಕ್ಕಂತೆ ಉನ್ನತೀಕರಣಗೊಳಿಸಿ ಕಾಯಕಲ್ಪ ನೀಡಿ ಹೊಸ ರೂಪ, ಚೈತನ್ಯ ಕೊಡಬೇಕಿದೆ. ಶೈಕ್ಷಣಿಕ ದೃಷ್ಟಿಯಿಂದಲೂ ನವತಂತ್ರಜ್ಞಾನ ಆಧರಿಸಿ ಗುಣಾತ್ಮಕ ಶಿಕ್ಷಣ ನೀಡಬೇಕಿದೆ. ಕೌಶಲ ಕಲಿಕೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಇಲ್ಲಿಯ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ.
ಗಾಂಧೀಜಿ ಭೇಟಿ ನೀಡಿದ್ದ ಶಾಲೆ:
ಈ ಶಾಲೆಯ ಮೊದಲ ಪ್ರವರ್ತಕರು ಎಂ.ಶ್ರೀನಿವಾಸರಾಯರು. ಮೊದಲು ಒಬ್ಬ ಕುರುಡ ಮತ್ತು ಮೂರು ಜನ ಮೂಗರಿಂದ ಅವರ ಮನೆಯಲ್ಲೇ ಶಾಲೆಯನ್ನು ತೆರೆದರು. ಬಳಿಕ ನಾಲ್ವಡಿಕೃಷ್ಣರಾಜ ಒಡೆಯರ್ ಅವರು ದೇಣಿಗೆ ನೀಡಿದ ಒಂಬತ್ತೂವರೆ ಎಕರೆ ಜಾಗದಲ್ಲಿ ಈಗಿನ ಶಾಲಾ ಕಟ್ಟಡ ತಲೆಯೆತ್ತಿದೆ.
ಇದು ದೇಶದ 3ನೇ ಮತ್ತು ರಾಜ್ಯದ ಮೊದಲ ಅಂಧರ ಶಾಲೆ ಎಂಬ ಕೀರ್ತಿಗೆ ಭಾಜನವಾಗಿದೆ. ಮೊದಲು 1887ರಲ್ಲಿ ಅಮೃತಸರ ಮತ್ತು 1890ರಲ್ಲಿ ತಮಿಳುನಾಡಿನ ಪಾಳೆಯಂಕೋಟಿಯಲ್ಲಿ ಶಾಲೆಗಳನ್ನು ತೆರೆಯಲಾಯಿತು. ನಂತರ 1901ರಲ್ಲಿ ಈ ಶಾಲೆ ಸ್ಥಾಪನೆಗೊಂಡಿತು. ಅಮೆರಿಕದ ಪ್ರಖ್ಯಾತ ಬರಹಗಾರ್ತಿ, ಅಂಗವಿಕಲರ ಏಳಿಗೆಗಾಗಿ ಶ್ರಮಿಸಿದ ಹೆಲನ್ ಕೆಲರ್ 1926ರಲ್ಲಿ ಮತ್ತು ಮಹಾತ್ಮ ಗಾಂಧೀಜಿ 1930ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದು ಚರಿತ್ರೆಯಲ್ಲಿ ದಾಖಲಾಗಿದೆ.
ಹಳೇ ವಿದ್ಯಾರ್ಥಿಗಳ ಸಾಧನೆ:
ಅಂದಾಜು ಒಂದು ಲಕ್ಷ ಅಂಧರಿಗೆ ಈ ಶಾಲೆ ಬೆಳಕಾಗಿದೆ. ಇಲ್ಲಿ ಕಲಿತವರು ಕತ್ತಲಿನ ಅಂಧಕಾರದಿಂದ ಹೊರಬಂದು ಶಿಕ್ಷಣದ ಕನ್ನಡಕದ ಸಹಾಯದಿಂದ ಉತ್ತಮ ಬದುಕು ಕಟ್ಟಿಕೊಂಡು ಮಾದರಿಯಾಗಿದ್ದಾರೆ. ಪಿಟೀಲು ವಿದ್ವಾಂಸ ಎ.ಎಸ್.ಶಿವರುದ್ರಪ್ಪ, ಮೂರು ವರ್ಷ ಹಿಂದೆ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಕೆಂಪಹೊನ್ನಯ್ಯ, ಮೈಸೂರು ವಿಶ್ವವಿದ್ಯಾಲಯದ ರಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ.ಕೃಷ್ಣಹೊಂಬಾಳ, ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ನಾಯಕ ಶೇಖರ್ ನಾಯ್ಕ ಇಲ್ಲಿಯ ವಿದ್ಯಾರ್ಥಿಗಳು. ಹೀಗೆ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳ ಸಾಧನೆ ಮಾಡಿದ್ದು ಸಾಮಾನ್ಯ ಸಂಗತಿಯಲ್ಲ.
ಇಳಿಕೆಯಾದ ಹಾಜರಾತಿ:
ಇದು 1 ರಿಂದ 10ನೇ ತರಗತಿಯ ವಸತಿ ಶಾಲೆ. ದಾವಣಗೆರೆ, ಹರಿಹರ, ರಾಯಚೂರು, ಬಳ್ಳಾರಿ ಸೇರಿ ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಹಾಜರಾತಿ ಸಂಖ್ಯೆ 150ರ ವರೆಗೂ ಇತ್ತು. ಆದರೀಗ ಹುಬ್ಬಳ್ಳಿ, ದಾವಣಗೆರೆ, ಕಲಬುರಗಿಯಲ್ಲಿ ಅಂಧರ ಶಾಲೆಯನ್ನು ಸ್ಥಾಪಿಸಿರುವುದರಿಂದ ಆ ಪ್ರದೇಶಗಳಿಂದ ಮಕ್ಕಳು ಬರುತ್ತಿಲ್ಲ. ಜತೆಗೆ, ಜಿಲ್ಲೆಗೊಂದು ಸರ್ಕಾರಿ, ಖಾಸಗಿ ಅಂಧರ ಶಾಲೆ ತಲೆಯೆತ್ತಿರುವುದರಿಂದಲೂ ಪ್ರವೇಶಾತಿ ಇಳಿಕೆಯಾಗಿದ್ದು, ಇದೀಗ ಬರೀ 30 ಅಂಧಮಕ್ಕಳು ಇಲ್ಲಿದ್ದಾರೆ.
ಪಿಯು ಕಾಲೇಜಿಗೆ ಪ್ರಸ್ತಾವನೆ:
ಇಲ್ಲಿ ಅಂಧರ ಪಿಯು ಕಾಲೇಜು ಸ್ಥಾಪನೆಗೆ ಪ್ರಯತ್ನ ನಡೆದಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದಕ್ಕೆ ಬೇಕಾಗಿರುವ ಅಗತ್ಯ ಸೌಲಭ್ಯ, ಹಾಸ್ಟೆಲ್ ವ್ಯವಸ್ಥೆ ಇಲ್ಲಿದೆ.
ಪಾಳು ಬಿದ್ದಿರುವ ಭವನ:
ಇಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾದ ಶತಮಾನೋತ್ಸವ ಭವನ ಉದ್ಘಾಟನೆ ಭಾಗ್ಯ ಕಾಣದೆ ಪಾಳು ಬಿದ್ದಿದ್ದು, ಜನಪ್ರತಿನಿಧಿಗಳ, ಆಡಳಿತ ವರ್ಗದ ಅಲಕ್ಷೃಕ್ಕೆ ಕೈಗನ್ನಡಿಯಾಗಿದೆ.
ರಾಜ್ಯಪಾಲರಾಗಿದ್ದ ರಮಾದೇವಿ ಅವರು ಅಡಿಗಲ್ಲು ಇಟ್ಟಿರುವ ಈ ಕಟ್ಟಡ 2012ರಲ್ಲಿ ನಿರ್ಮಾಣವಾಗಿದ್ದರೂ ಈವರೆಗೆ ಉದ್ಘಾಟನೆಗೊಂಡಿಲ್ಲ. ಅಂಗವಿಲಕರ ಅಭ್ಯುದಯಕ್ಕೆ ಬಳಕೆಯಾಗಬೇಕಿದ್ದ ಕಟ್ಟಡ ಮೂಲೆಗುಂಪಾಗಿದ್ದು, ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದು ಕಿಟಕಿಯ ಗಾಜುಗಳಿಲ್ಲದೆ ಹಾಳು ಕೊಂಪೆಯಂತಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸಿ ಈ ಭವನ ಉದ್ಘಾಟಿಸಬೇಕು ಎಂಬುದು ಇಲಾಖೆಯ ಉದ್ದೇಶವೂ ಈವರೆಗೂ ಈಡೇರಿಲ್ಲ. ಭವನ ಸದ್ಯ ನಿರುಪಯುಕ್ತ ವಸ್ತುಗಳ ಗೋದಾಮ ಆಗಿದೆ. ಇದನ್ನು ಸಭೆ ಸಮಾರಂಭಗಳಿಗೆ ಬಾಡಿಗೆ ನೀಡಿ ಸರ್ಕಾರಕ್ಕೆ ಬರಬೇಕಿದ್ದ ಆದಾಯವೂ ತಪ್ಪಿದೆ.
ಅನೈತಿಕ ಚಟುವಟಿಕೆ ತಾಣ:
ಅಂಧರ ಶಾಲೆಯೊಂದಿಗೆ ಕಿವುಡ ಮಕ್ಕಳಗಾಗಿ ಪ್ರತ್ಯೇಕ ಶಾಲೆವಿದೆ. ಬ್ರೈಲ್ ಮುದ್ರಣಾಲಯ, ಡಿಇಡಿ ಶಿಕ್ಷಕರ ತರಬೇತಿ ಸಂಸ್ಥೆ ಸೇರಿದಂತೆ ನಾಲ್ಕು ಸಂಸ್ಥೆಗಳಿವೆ. ಮೂರು ಗೇಟ್‌ನೊಂದಿಗೆ ಈ ಕ್ಯಾಂಪಸ್ ಸುತ್ತ ಕಾಂಪೌಂಡ್ ನಿರ್ಮಿಸಿದ್ದರೂ, ಅದನ್ನು ಹೊಡೆದು ಹಾಕಿ ಅತಿಕ್ರಮ ಪ್ರವೇಶ ಮಾಡಲಾಗುತ್ತಿದೆ. ಸಂಜೆಯಾದರೆ ಸ್ಥಳೀಯರ ಕುಡುಕರಿಗೆ ಹಾಗೂ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಬಿಡಾಡಿ ದನಗಳಿಗೂ ಬಿಡಾರವಾಗಿದೆ. ಒಟ್ಟಿನಲ್ಲಿ ಅಶಿಸ್ತು, ಅವ್ಯವಸ್ಥೆ, ಅನೈರ್ಮಲ್ಯ ರಾಚುತ್ತಿದ್ದು, ಇದನ್ನು ನಿವಾರಣೆ ಮಾಡಿ ಅಂಗವಿಕಲರ ಸ್ನೇಹಿ ವಾತಾವರಣವನ್ನು ನಿರ್ಮಿಸಬೇಕಿದೆ.
ಸಾಮಾನ್ಯ ಶಾಲೆಗೆ ಅಂಧ ಮಕ್ಕಳನ್ನು ಸೇರಿಸಬೇಡಿ. ಅಂತಹ ಕಡೆ ಅಂಧರಿಗೆ ಕಲಿಸಲು ಪರಿಣಿತ ಶಿಕ್ಷಕರ, ಬ್ರೈನ್ ಲಿಪಿ ಸೌಲಭ್ಯ ದೊರೆಯಲ್ಲ. ವಿಶೇಷ ಮಕ್ಕಳ ಕುರಿತು ಗಮನ ನೀಡಲು ಆಗಲ್ಲ. ಬ್ಲಾಕ್‌ಬೋರ್ಡ್ ಕಲಿಕೆ ಈ ಮಕ್ಕಳ ತಲೆಗೆ ಹೋಗಲ್ಲ. ಬೋಧನೆ ಕೂಡ ಅಂಧ ಮಕ್ಕಳಿಗೆ ಅರ್ಥವಾಗಲ್ಲ. ಹೀಗಾಗಿ, ಅಂಧರ ಶಾಲೆಗೆ ಅಂಧರನ್ನು ಸೇರಿಸಬೇಕು. ನಮ್ಮಲ್ಲೂ ಸಾಮಾನ್ಯ ಶಾಲಾ ಪಠ್ಯಕ್ರಮವನ್ನೇ ಬೋಧಿಸಲಾಗುತ್ತದೆ. ಬ್ರೈನ್ ಲಿಪಿಯ ಸ್ಪರ್ಶಜ್ಞಾನದ ಮೂಲಕ ನುರಿತ ಶಿಕ್ಷಕರು ಕಲಿಸುತ್ತಾರೆ. ಪಠ್ಯೇತರ ಚಟುವಟಿಕೆಗಳನ್ನೂ ಹೇಳಿಕೊಡಲಾಗುತ್ತದೆ. ಶೇ.40ರಷ್ಟು ದೃಷ್ಟಿದೋಷ ಇರುವ ಮಕ್ಕಳೂ ಇಲ್ಲಿ ಪ್ರವೇಶಾತಿ ಪಡೆದುಕೊಳ್ಳಬಹುದು.
ಸತೀಶ್ ಕ್ಯಾತನಹಳ್ಳಿ, ಶಾಲಾ ಅಧೀಕ್ಷಕ