

ಮೈಸೂರು: ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ ಮೂರನೇ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ನಗರ ಚಾಮುಂಡಿಪುರ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಪೌರಕಾರ್ಮಿಕರಿಗೆ ಸನ್ಮಾನಿಸಿ, ಸಿಹಿ ಹಂಚಲಾಯಿತು.
ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್ ಮಾತನಾಡಿ, ಮೈಸೂರಿಗೆ ಪ್ರಶಸ್ತಿ ಬಂದಿರುವುದು ನಿಜಕ್ಕೂ ಸಂತಸದ ತಂದಿದೆ. ಇಂತಹ ಬೆಳವಣಿಗೆಯಿಂದ ಪ್ರವಾಸೋದ್ಯಮ ಕ್ಷೇತ್ರವು ಬೆಳೆಯುತ್ತದೆ ಎಂದರು. ಪ್ರಶಸ್ತಿಗೆ ಕಾರಣರಾದ, ಹಗಲಿರುಳು ಶ್ರಮಿಸುವ ಪೌರಕಾರ್ಮಿಕರು, ಸಾರ್ವಜನಿಕರು, ಮಾಧ್ಯಮ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಮುಂದಿನ ಬಾರಿ ಮೈಸೂರು ನಗರ ಮೊದಲ ಸ್ಥಾನಕ್ಕೆ ಬರಲು ಎಲ್ಲರೂ ಸಹಕರಿಸಬೇಕು. ಸ್ವಚ್ಛತೆ ಕೇವಲ ನಗರಪಾಲಿಕೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಸಂಘ-ಸಂಸ್ಥೆಗಳ ಸಹಭಾಗಿತ್ವ ಕೂಡ ಮುಖ್ಯವಾಗುತ್ತದೆ ಎಂದು ಹೇಳಿದರು.
ಮೈಸೂರು ನಗರಪಾಲಿಕೆಯಲ್ಲಿ ನಿಯಂತ್ರಣ ಕೊಠಡಿ, ಆಧುನಿಕ ಯತ್ರೋಪಕರಣಗಳು, ಸಿಬ್ಬಂದಿ ಹೆಚ್ಚಾಗಿ ನೇಮಿಸಬೇಕು, ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಲು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.
ನಗರ ಪಾಲಿಕೆ ವಲಯ ಆಯುಕ್ತ ಮಂಜುನಾಥರೆಡ್ಡಿ, ಪರಿಸರ ಇಂಜಿನಿಯರ್ ಜ್ಯೋತಿ, ಆರೋಗ್ಯ ನಿರೀಕ್ಷಕ ಶಿವಪ್ರಸಾದ್, ಮೇಲ್ವಿಚಾರಕ ಶಂಕರ್, ಮುಖಂಡರಾದ ಜಿ.ರಾಘವೇಂದ್ರ, ಲಕ್ಷ್ಮೀನಾರಾಯಣ, ನಿರಂಜನ್, ಮಂಜುನಾಥ್, ಧರ್ಮೇಂದ್ರ, ಸೋಮೇಶ್, ರವಿ, ಪವನ, ಚೇತನ್, ರಾಮಯ್ಯ, ಶಿವಲಿಂಗಾಚಾರ್, ಮಧು, ಶಿವು, ನಾಗಣ್ಣ ಇತರರು ಇದ್ದರು.