ಮೈಸೂರು: ಸ್ವಚ್ಛತೆಗೆ ಸಹಕರಿಸದಿದ್ದರೆ ದಂಡ

mcc (3)
Published on

ಸದೇಶ್ ಕಾರ್ಮಾಡ್ ಮೈಸೂರು
ನಗರದ ಸ್ವಚ್ಛತೆಗೆ ಸಹಕಾರ ನೀಡುವಂತೆ ನಗರ ಪಾಲಿಕೆ ಎಷ್ಟೇ ಮನವಿ ಮಾಡಿದರೂ ಕೆಲವರು ಸ್ಪಂದಿಸುವ ಮಾನಸಿಕತೆಯನ್ನೇ ಹೊಂ ದಿಲ್ಲ. ಇಂತಹವರಿಗೆ ದಂಡ ವಿಧಿಸುವ ಕಾರ್ಯವನ್ನು ನಗರ ಪಾಲಿಕೆ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.

ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿಯು ದೇಶದಲ್ಲಿ 27ನೇ ಸ್ಥಾನಕ್ಕೆ ಕುಸಿದ ನಂತರ ನಗರ ಪಾಲಿಕೆಯು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಪ್ರಾರಂಭಿಸಿದ್ದು, ರಸ್ತೆ ಬದಿಯಲ್ಲಿ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯವನ್ನು ತಂದು ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದ.ಎ ಇತ್ತೀಚೆಗೆ 50ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸುವ ಮೂಲಕ ಬಿಸಿಮುಟ್ಟಿಸಲಾಗಿದೆ.

ಜನರು ಪ್ರತಿನಿತ್ಯ ತ್ಯಾಜ್ಯ ಎಸೆಯುವ ಸ್ಥಳಗಳನ್ನು ಗುರುತಿಸಿರುವ ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿ ಎಚ್ಚರಿಕೆಯ ಫಲಕಗಳನ್ನು ಅಳವಡಿ ಸಿದ್ದಾರೆ. ಎಚ್ಚರಿಕೆ ಫಲಕ ಅಳವಡಿಸಿದರೂ ಕೆಲವರು ತ್ಯಾಜ್ಯವನ್ನು ತಂದು ಸುರಿಯುವುದನ್ನು ನಿಲ್ಲಿಸುತ್ತಿಲ್ಲ. ಇಂತಹವರಿಗೆ ದಂಡ ವಿಧಿಸಲು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದಿಢೀರ್ ಭೇಟಿ ನೀಡುತ್ತಿದ್ದಾರೆ.

ನಗರದ ಪ್ರತಿ ಮನೆಗಳಿಂದ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕವಾಗಿ ಪಡೆಯುವಂತೆ ಪೌರ ಕಾರ್ಮಿಕರಿಗೆ ನಗರ ಪಾಲಿಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಹಸಿಕಸ ಹಾಗೂ ಒಣಕಸವನ್ನು ಪ್ರತ್ಯೇಕಿಸದೆ ಒಟ್ಟಿಗೆ ನೀಡುವವರಿಂದ ಪೌರ ಕಾರ್ಮಿಕರು ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಇಂತಹವರು ಇದೀಗ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯುತ್ತಿದ್ದು, ಇದರಿಂದ ನಗರದಲ್ಲಿ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದೆ. ಪೌರ ಕಾರ್ಮಿಕರು ಮನೆ ಬಳಿಗೆ ಬಂದಾಗ ತ್ಯಾಜ್ಯವನ್ನು ನೀಡದೆ ಅಸಹಕಾರ ತೋರುವವರಿಗೂ ದಂಡ ವಿಧಿಸಲು ಪಾಲಿಕೆ ಚಿಂತನೆ ನಡೆಸಿದೆ.

ತ್ಯಾಜ್ಯ ಎಸೆದು ಪ್ರಥಮ ಬಾರಿಗೆ ಸಿಕ್ಕಿಬಿದ್ದವರಿಂದ 500 ರೂ. ದಂಡ ವಸೂಲಾತಿ ಮಾಡಲಾಗುತ್ತಿದ್ದು, ಪುನರಾವರ್ತಿಸಿದರೆ 1,000 ರೂ. ದಂಡ ವಿಧಿಸಲಾಗುತ್ತಿದೆ. ಮೂರನೇ ಬಾರಿ ತ್ಯಾಜ್ಯ ಎಸೆಯುವುದು ಕಂಡುಬಂದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಗರ ಪಾಲಿಕೆ ತೀರ್ಮಾನಿಸಿದೆ.

3 ವಿಭಾಗದಲ್ಲಿ ಹಿಂದೆ: ಮೈಸೂರು ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹ (ಶೇ.97), ಮನೆಗಳಿಂದ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ಪಡೆಯುದು (ಶೇ.70), ಉತ್ಪಾದನೆಯಾದ ತ್ಯಾಜ್ಯದ ಸಂಸ್ಕರಣೆ (ಶೇ.94) ವಿಭಾಗದಲ್ಲಿ ಹಿಂದೆ ಬಿದ್ದಿದೆ. ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿ ಪಡೆಯಲು ನಗರ ಪಾಲಿಕೆ ಹಿಂದೆ ಬಿದ್ದ ಹಿನ್ನೆಲೆಯಲ್ಲಿ ಮೈಸೂರು 2023ರ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಮಗ್ರ ವಿಭಾಗದಲ್ಲಿ 27ನೇ ಸ್ಥಾನಕ್ಕೆ ಕುಸಿತ ಕಂಡಿತು.

ತ್ಯಾಜ್ಯಮುಕ್ತವಾಗಿಸಬೇಕು: ನಗರ 2019ರಿಂದ ನಿರಂತರವಾಗಿ ಫೈವ್ ಸ್ಟಾರ್ ರೇಟಿಂಗ್‌ನೊಂದಿಗೆ ತ್ಯಾಜ್ಯ ಮುಕ್ತ ನಗರ ಪ್ರಶಸ್ತಿ ಪಡೆಯುತಿತ್ತು. ಆದರೆ, ಈ ಬಾರಿ ತ್ರೀ ಸ್ಟಾರ್‌ಗೆ ಕುಸಿತ ಕಂಡಿದೆ. ನಗರದಲ್ಲಿ ಎಲ್ಲೆಂದರಲ್ಲಿ ಜನರು ಮನಬಂದಂತೆ ತ್ಯಾಜ್ಯವನ್ನು ಎಸೆಯುತ್ತಿರುವ ಪರಿಣಾಮ ಈ ವಿಭಾಗದಲ್ಲಿ ಮೈಸೂರು ಹಿನ್ನಡೆ ಅನುಭವಿಸಿದೆ. ನಗರವನ್ನು ಸ್ವಚ್ಛವಾಗಿಡಲು ನಗರದ ಬಹುತೇಕ ಜನರು ಸಹಕಾರ ನೀಡುತ್ತಿದ್ದಾರೆ. ಕೆಲವು ಜನರು ಮನೆ ಬಳಿಗೆ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ತ್ಯಾಜ್ಯ ನೀಡದೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿರುವ ಪರಿಣಾಮ ಮೈಸೂರಿನ ರೇಟಿಂಗ್ ಕುಸಿತ ಕಂಡಿದೆ. ನಗರದ ಜನರು ಮನಸ್ಸು ಮಾಡಿದರೆ ಈ ವಿಭಾಗದಲ್ಲಿ ನಗರದ ರೇಟಿಂಗ್ ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮೂರು ಪಾಳಿ ಅವಶ್ಯಕ: ದೇಶದ ನಂ.1 ಸ್ವಚ್ಛ ನಗರಿಯಾಗಿರುವ ಇಂದೋರ್‌ನಲ್ಲಿ ಮೂರು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಆದರೆ, ನಗರದಲ್ಲಿ ಒಂದು ಪಾಳಿಯಲ್ಲಿ ಮಾತ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದೆ. ಇಂದೋರ್‌ಗೆ ಪೈಪೋಟಿ ನೀಡಬೇಕಾದರೆ ನಮ್ಮಲ್ಲೂ ಮೂರು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಅವಶ್ಯಕತೆ ಇದೆ. ಪೌರ ಕಾರ್ಮಿಕರು ಮನೆ ಮನೆಗಳಿಂದ ಸರಿಯಾಗಿ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದಾರೆಯೇ, ಕಸ ಸಂಗ್ರಹಿಸುವ ವಾಹನ ಸರಿಯಾದ ಸಮಯಕ್ಕೆ ವಾರ್ಡ್‌ಗಳಿಗೆ ತೆರಳುತ್ತಿವೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡಲು ಕಮಾಂಡ್ ಸೆಂಟರ್ ನಿರ್ಮಾಣ ಮಾಡುವ ಹಾಗೂ ಹೆಚ್ಚುವರಿ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲು ಕ್ರಮ ವಹಿಸಬೇ ಕಾಗಿದೆ.

ನಗರದ ಸ್ವಚ್ಛತೆಗೆ ಸಹಕಾರ ನೀಡದೆ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಲು ಪ್ರಾರಂಭಿಸಿದ್ದೇವೆ. 50ಕ್ಕೂ ಹೆಚ್ಚು ಜನರಿಗೆ ದಂಡವನ್ನು ವಿಧಿಸಲಾಗಿದೆ. ದಂಡ ವಿಧಿಸಿದ ನಂತರವೂ ತ್ಯಾಜ್ಯ ಎಸೆಯುವುದನ್ನು ಮುಂದುವರೆಸಿದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ನಗರ ಸ್ವಚ್ಛತೆಯಲ್ಲಿ ನಂ.1 ಸ್ಥಾನಕ್ಕೆ ಮರಳಲು ಪೌರ ಕಾರ್ಮಿಕರ ಪರಿಶ್ರಮದ ಜತೆಗೆ ನಾಗರಿಕರ ಸಹಕಾರವೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲ ನಾಗರಿಕರು ನಗರದ ಸ್ವಚ್ಛತೆಗೆ ಸಹಕರಿಸಬೇಕು.
ಡಾ.ವೆಂಕಟೇಶ್, ನಗರ ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net