

ಮೈಸೂರು: ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಪ್ರಥಮ ಬಾರಿಗೆ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿ ರದಲ್ಲಿ ಜ.26 ರಿಂದ 2ರವರೆಗೆ ‘ಮೈಸೂರು ಫೆಸ್ಟ್’ ಆಯೋಜಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮೈಸೂರಿಗೆ ಕೇವಲ ದಸರಾ ಸಂದರ್ಭದಲ್ಲಿ ಮಾತ್ರವಲ್ಲ ಎಲ್ಲ ದಿನಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶವನ್ನು ‘ಮೈಸೂರು ಫೆಸ್ಟ್’ ಹೊಂದಿದೆ. ಪ್ರವಾಸೋದ್ಯಮ ಕ್ಷೇತ್ರ ಕೇವಲ ಮೈಸೂರು ಅರಮನೆ, ಮೃಗಾಲಯಕ್ಕೆ ಮಾತ್ರ ಸೀಮಿತ ಗೊಳ್ಳದೆ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ಕಡೆಗೆ ಪ್ರವಾಸಿಗರನ್ನು ಸೆಳೆಯಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಮೈಸೂರು ಫೆಸ್ಟ್’ ಅನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳ ಬೇಕು. ಉತ್ಸವದಲ್ಲಿ ಯಾವುದೇ ರೀತಿಯ ಲೋಪಗಳು ಆಗದಂತೆ ನೋಡಿಕೊಳ್ಳಬೇಕು. ಉತ್ಸವದ ಮೂಲಕ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬೇಕು ಎಂದರು.
ಜಿಲ್ಲೆಯು ಈಗಾಗಲೇ ವಿಶ್ವ ವಿಖ್ಯಾತ ಮೈಸೂರು ದಸರಾ, ಹಲವಾರು ಪ್ರೇಕ್ಷಣೀಯ ಸ್ಥಳಗಳು, ಪ್ರಸಿದ್ಧ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಹಿನ್ನಲೆಯಲ್ಲಿ ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆ ಹೆಚ್ಚಿಸಲು ‘ಬ್ರಾೃಂಡ್ ಮೈಸೂರು’ ಲೋಗೋವನ್ನು ಅನಾವರಣಗೊಳಿಸಲಾಗಿದೆ. ಈ ಲೋಗವನ್ನು ಎಲ್ಲ ಸರ್ಕಾರಿ ಕಚೇರಿಗಳು, ಸರ್ಕಾರಿ ಅನುದಾನಿತ ಸಂಸ್ಥೆಗಳು ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಬಳಸುವುದರ ಮೂಲಕ ಜಿಲ್ಲೆಯ ಮತ್ತಷ್ಟು ಪ್ರಖ್ಯಾತಿಗೆ ಎಲ್ಲರು ಕೈ ಜೋಡಿಸಬೇಕು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಮಾತನಾಡಿ, ವಾಸೋದ್ಯಮ ಇಲಾಖೆ ವತಿಯಿಂದ ‘ಮೈಸೂರು ಫೆಸ್ಟ್’ಗೆ 50 ಲಕ್ಷ ರೂ.ಅನುದಾನ ಒದಗಿಸಲಾಗುವುದು. ಉಳಿದ ಅನುದಾನವನ್ನು ಹೊಂದಿಸಬೇಕಾಗಿದೆ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಸಿದ ಸಚಿವ ಮಹದೇವಪ್ಪ, ಮೂರು ದಿನಗಳ ಕಾಲ ಅದ್ಧೂರಿಯಾಗಿ ಕಾರ್ಯಕ್ರಮ ಮಾಡಬೇಕಾದರೆ 50 ಲಕ್ಷ ಸಾಕಾಗುವುದಿಲ್ಲ. ಇಲಾಖೆಗೆ 50 ಲಕ್ಷ ರೂ.ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಬೇಕು. ಪ್ರಾಯೋಜಕತ್ವದ ಮೂಲಕ 1 ಕೋಟಿ ರೂ. ಸಂಗ್ರಹಿಸಿ ಕಾರ್ಯಕ್ರಮ ರೂಪಿಸಬೇಕು. ಸ್ಥಳೀಯ ಕಲಾವಿದರ ಜತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸಬೇಕು. ಕಾರ್ಯಕ್ರಮಗಳ ಅಂತಿಮ ರೂಪುರೇಷೆ ಸಿದ್ಧವಾದ ಮೇಲೆ ಜನವರಿ ಮೊದಲ ವಾರದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ ಅಂತಿಮಗೊಳಿಸೋಣ ಎಂದು ಸಚಿವರು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ‘ಮೈಸೂರು ಫೆಸ್ಟ್’ನಲ್ಲಿ ಮೈಸೂರು ಪರಂಪರೆಯನ್ನು ಬಿಂಬಿಸುವ ಅತ್ಯುತ್ತಮ ಕಲಾತಂಡಗಳಿಂದ ನಗಾರಿ, ಡೊಳ್ಳು, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಮಕ್ಕಳು ಹಾಗೂ ದೊಡ್ಡವರಿಗಾಗಿ ಚಿತ್ರಸಂತೆ, ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಮೈಸೂರು ಸ್ಥಳೀಯ ಉತ್ಪನ್ನಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ದಿಷ್ಟ ಬೆಲೆಗೆ ಒಂದೇ ಸೂರಿನಡಿ ಮಾರಾಟ ಮಾಡಲು ಮಾರುಕಟ್ಟೆ ಆಯೋಜನೆ, ಆಹಾರಮೇಳ, ಫ್ಯಾಷನ್ ಶೋ( ವಿವಿಧ ಬ್ರಾೃಂಡೆಂಡ್ ವಸ್ತುಗಳ ಮಾರಾಟಗಾರಿಂದ ಸೇಲ್ಸ್ ಉತ್ತೇಜನಕ್ಕಾಗಿ), ಗಾಳಿಪಟ ಉತ್ಸವ, ರಾಕ್‌ಬ್ಯಾಂಡ್ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಹಾಗೂ ವೀಕ್ಷಕರಿಗೆ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ, ಸಾರ್ವಜನಿಕ ಶೌಚಗೃಹದ ವ್ಯವಸ್ಥೆ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 24 ಗಂಟೆಗಳು ಸ್ವಚ್ಛತೆ ಕಾಪಾಡುವ ಕೆಲಸ ಆಗಬೇಕು. ಪ್ರವಾಸಿಗರಿಗೆ ಮನೋರಂಜನೆ ನೀಡುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಮಾತನಾಡಿ, ‘ಬ್ರಾೃಂಡ್ ಮೈಸೂರು-2023’ ಸ್ಪರ್ಧೆಯಲ್ಲಿ ಬಿಡುಗಡೆ ಮಾಡಿರುವ ಲೋಗೋ, ಮ್ಯಾಸ್ಕಾಟ್, ಸ್ಮರಣಿಕೆಗಳನ್ನು ಬಳಸುವುದರ ಮೂಲಕ ಮೈಸೂರು ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಬ್ಯಾರಿಕೇಡ್, ಸಿಗ್ನಲ್ ಬೋರ್ಡ್, ಪೊಲೀಸ್ ಚೌಕಿಗಳಲ್ಲಿ ನಮ್ಮ ಪರಂಪರೆ ನಿಮ್ಮ ತಾಣ ಎಂಬ ಅಡಿಬರಹವನ್ನು ಒಳಗೊಂಡ ಮೈಸೂರಿನ ನೂತನ ಲೋಗೋ ಅಳವಡಿಕೆಗೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಕುಮಾರ್, ಪ್ರಾಚ್ಯ ವಸ್ತುಸಂಗ್ರಹಾಲಯದ ಆಯುಕ್ತ ದೇವರಾಜು, ಡಿಸಿಪಿ ಮುತ್ತುರಾಜ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ ಹರೀಶ್, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮೈಸೂರು ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು, ಮೈಸೂರು ಸಂಘ ಸಂಸ್ಥೆಗಳ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಮೈಸೂರು ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಆನಂದ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ಜೆ.ಪಿ ಅರಸ್ ಹಾಗೂ ಇತರರು ಇದ್ದರು.