

ಮೈಸೂರು: ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜ.26ರಿಂದ ಮೂರು ದಿನ ಆಯೋಜಿಸಿರುವ ‘ಮೈಸೂರು ಫೆಸ್ಟ್-2024’ ಮೈಸೂರಿನ ಕಲೆ, ಸಂಸ್ಕೃತಿ ಮತ್ತು ಪ್ರವಾಸಿತಾಣಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಲು ಒಂದು ಉತ್ತಮ ವೇದಿಕೆಯಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಮಯೂರ ಹೋಟೆಲ್‌ನಲ್ಲಿ ‘ಮೈಸೂರು ಫೆಸ್ಟ್-2024’ ಕಾರ್ಯಕ್ರಮ ಸಿದ್ಧತೆ ಕುರಿತು ಶನಿವಾರ ನೇರ ಪಾಲುದಾರರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನವರಿ 26, 27 ಹಾಗೂ 28 ಮೂರು ದಿನಗಳ ಕಾಲ ಆಯೋಜಿಸಿರುವ ಫೆಸ್ಟ್‌ನಲ್ಲಿ ಮೈಸೂರಿನ ಅಂಶಗಳನ್ನು ಒಳಗೊಂಡ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಲ್ಲದೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಜತೆಗೆ ಜನವರಿ 26 ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಇರುವ ಕ್ಲಾಕ್ ಟವರ್ ರಸ್ತೆಯ ಬದಿಯಲ್ಲಿ ಚಿತ್ರಸಂತೆ ಆಯೋಜಿಸಲಾಗುವುದು ಎಂದು ಹೇಳಿದರು.
ಚಿತ್ರಸಂತೆ ಜತೆಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ಕಲಾವಿದರು ಹಾಗೂ ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಎರಡು ವಿಭಾಗದಲ್ಲಿ ಬಹುಮಾನವನ್ನು ನೀಡಲಾಗುವುದು ಎಂದು ಹೇಳಿದರು.
ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸ್ಥಳೀಯ ಕಲಾ ತಂಡಗಳಿಂದ ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಮನರಂಜನೆ ಜತೆಗೆ ಮೈಸೂರು ಕಲೆ, ಸಂಸ್ಕೃತಿ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಜನವರಿ 27ರಂದು ಮೈಸೂರು ಫೆಸ್ಟ್-2024ರ ವೇದಿಕೆ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಸಂಜೆ 5.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ, ಪ್ರವಾಸೋದ್ಯಮ ಇಲಾಖೆ ಸಚಿವರು, ವಿವಿಧ ಜನಪ್ರತಿನಿಧಿಗಳಿಂದ ಉದ್ಘಾಟಿಸಲಾಗುವುದು. ಸಂಜೆ 6.30ರ ನಂತರ ಎರಡು ದಿನಗಳ ಕಾಲ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳಿಂದ ವಿವಿಧ ಕಾರ್ಯಕ್ರಮ ಜರುಗಲಿವೆ ಎಂದು ವಿವರಿಸಿದರು.
ಮೈಸೂರು ಫೆಸ್ಟ್-2024 ಅಂಗವಾಗಿ ಮೈಸೂರು ವಿವಿ ಬಯಲು ರಂಗಮಂದಿರದಲ್ಲಿ ಹೊಂದಿಕೊಂಡಂತೆ ಇರುವ ಸ್ಥಳಗಳಲ್ಲಿ ವಿವಿಧ ಉದ್ಯಮಗಳ ಮಳಿಗೆಗಳನ್ನು ತೆರೆದು ಮಾಹಿತಿ ನೀಡಲಾಗುವುದು. ಮಳಿಗೆಗಳಲ್ಲಿ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ಈ ಬಾರಿ ಮೈಸೂರಿನ ಸ್ಥಳೀಯ ವಿಚಾರಗಳನ್ನು ತಿಳಿಸುವ ಹಾಗೂ ಪ್ರಾಮುಖ್ಯತೆ ಸಾರುವ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಪ್ರಮುಖವಾಗಿ ಮೈಸೂರಿನ ವಿಶೇಷ ಖಾದ್ಯಗಳು ಮತ್ತು ಮೈಸೂರಿನ ಸ್ಥಳೀಯ ಉತ್ಪನ್ನಗಳು, ಮೈಸೂರಿನ ವಿಶೇಷವಾದ ತಿಂಡಿ-ತಿನಿಸುಗಳ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಮನೆಗಳ ಅಲಂಕಾರ, ಮಕ್ಕಳ ಆಟಿಕೆಗಳು, ಮಹಿಳೆಯರಿಗೆ ಸಂಬಂಧಪಟ್ಟ ವಸ್ತುಗಳು, ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ಟಾಲ್‌ಗಳಿಗೆ ಬ್ರ್ಯಾಂಡ್ ಮೈಸೂರು ಫೆಸ್ಟ್‌ನಲ್ಲಿ ಅವಕಾಶ ನೀಡಲಾಗುವುದು. ನಗರದ ಪ್ರಮುಖ ಪ್ರವಾಸಿ ಸ್ಥಳಗಳು, ಹೋಟೆಲ್, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸ್ವಯಂಪ್ರೇರಿತರಾಗಿ ಲೋಗೋ ಪ್ರದರ್ಶಿಸಲು ಮುಂದಾಗಬೇಕು. ನೇರ ಪಾಲುದಾರರು ಬ್ರಾೃಂಡ್ ಮೈಸೂರು ಲೋಗೋ ಹಾಗೂ ಮೈಸೂರು ಫೆಸ್ಟ್ 2024 ಕಾರ್ಯಕ್ರಮದ ಕುರಿತು ಹೆಚ್ಚಿನ ರೀತಿಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬೇಕು ಎಂದು ಕೋರಿದರು.
ಈ ಬಾರಿಯ ಮೈಸೂರು ಫೆಸ್ಟ್‌ನಲ್ಲಿ ಪ್ಲೀ-ಮಾರ್ಕೆಟಿಂಗ್ ಒಂದೇ ಸೂರಿನಲ್ಲಿ ಮೈಸೂರು ಬ್ರಾೃಂಡ್ ಉತ್ಪನ್ನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಹೊಸ ಬಗೆಯ ಮಳಿಗೆಗಳನ್ನು ತೆರೆಯಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಬ್ರಾೃಂಡ್ ಮೈಸೂರು ಫೆಸ್ಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪ್ರವಾಸಿ ತಾಣಗಳಲ್ಲಿ ಪೋಸ್ಟರ್, ಬ್ಯಾನರ್‌ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಹೋಟೆಲ್ ಮಾಲೀಕರ ಸಂಘದ ಸಿ.ನಾರಾಯಣಗೌಡ, ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಪ್ರಶಾಂತ್, ಜಿಎಸ್‌ಎಸ್ ಯೋಗ ಸಂಸ್ಧೆ ಅಧ್ಯಕ್ಷ ಡಿ.ಶ್ರೀಹರಿ, ಚಾಲಕರ ಸಂಘದ ಅಧ್ಯಕ್ಷ ನಾಗರಾಜು, ಡಿ.ದೇವರಾಜ ಅರಸು ರಸ್ತೆ ಅಂಗಡಿ ಮಾಲೀಕರ ಹಾಗೂ ಬಾಡಿಗೆದಾರರ ಸಂಘದ ಅಧ್ಯಕ್ಷ ವೀರಭದ್ರ, ಅನುಮೋದಿತ ಮಾರ್ಗದರ್ಶಿ ಸಂಘಗಳ ಅಧ್ಯಕ್ಷ ಎಸ್.ಜೆ.ಅಶೋಕ್, ಟ್ರಾವೆಲ್ಸ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್, ಮಹಾಲಕ್ಷ್ಮೀ ಸ್ವೀಟ್ ಹೌಸ್, ಭೀಮಾ ಜ್ಯುಯೆಲ್ಲರ್ಸ್‌ನ ಮಹೇಶ್ ಮತ್ತಿತರರು ಹಾಜರಿದ್ದರು.