ಮೈಸೂರು ದಸರೆಗೆ ವಿಂಟೇಜ್, ಕ್ಲಾಸಿಕ್ ಕಾರುಗಳ ಮೆರಗು

35
Published on

ಮೈಸೂರು: ಶತಮಾನ ಕಂಡಿರುವ ನಾನಾ ವಿಂಟೇಜ್ ಕಾರುಗಳು ಮತ್ತು ಕ್ಲಾಸಿಕ್ ಕಾರುಗಳ ಪ್ರದರ್ಶನ ನಾಡಹಬ್ಬ ದಸರಾಕ್ಕೆ ಮತ್ತಷ್ಟು ಮೆರುಗು ನೀಡಿದೆ.
ನಗರದ ವಿಂಟೇಜ್ ಮತ್ತು ಕ್ಲಾಸಿಕ್ ಕಲೆಕ್ಷನ್‌ನಿಂದ ಹೆಬ್ಬಾಳು ಕೈಗಾರಿಕಾ ಪ್ರದೇಶದ ವಿ2 ಬಳಿಯ ನ್ಯಾಷನಲ್ ಗ್ರಾೃನೈಟ್ ಆವರಣದಲ್ಲಿ ಆಯೋಜಿಸಿರುವ ಪ್ರದರ್ಶನ ಈಗ ಆಕರ್ಷಣೆಯ ಕೇಂದ್ರವಾಗಿದೆ.
ಒಂದೇ ಸೂರಿನಡಿ ಅದ್ಭುತವಾದ ಕಾರು ಸಂಗ್ರಹ ಪ್ರದರ್ಶನ ಇಲ್ಲಿದ್ದು, ಪ್ರತಿವರ್ಷ ಇಲ್ಲಿ ಬೆಂಗಳೂರು ಮಾತ್ರವಲ್ಲದೆ ಗೋವಾ, ಹೈದರಾಬಾದ್, ಚೆನ್ನೈ, ಪಾಂಡಿಚೇರಿ ಸೇರಿದಂತೆ ಇನ್ನಿತರ ನಗರಗಳಿಂದ ಕಾರು ಪ್ರಿಯರು ತಮ್ಮ ಕಾರುಗಳನ್ನು ತಂದು ಪ್ರದರ್ಶನಕ್ಕೆ ಇರಿಸುತ್ತಾರೆ.
ಇಂಗ್ಲೆಂಡ್‌ನ 1920ರ ಮಾಡೆಲ್‌ನ ಕಾರು ಹಾಗೂ 40ಕ್ಕೂ ಹೆಚ್ಚು ಬೈಕ್ ಸೇರಿದಂತೆ ವಿವಿಧ ಬಣ್ಣದ, ಆಕೃತಿಯ ಕಾರು ಬೈಕ್‌ಗಳು ನೋಡುಗರ ಮನಸೂರೆಗೊಂಡವು. ಇವುಗಳು ನಗರವನ್ನು ಪ್ರದಕ್ಷಿಣೆ ಹಾಕುವಾಗ ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಸುಂದರ ಘಳಿಗೆಗೆ ವಿಂಟೇಜ್ ಕಾರು ಪ್ರದರ್ಶನ ಸಾಕ್ಷಿಯಾಯಿತು. 80 ರಿಂದ 100 ವರ್ಷ ಹಳೆಯದಾದ ಮ್ಯಾರಿಸ್ ಮೈನರ್, ಅಸ್ಟಿನ್, ರೋಡ್ ಮಾಸ್ಟರ್, ರೋಲ್ಸ್ರಾಯ್ ಸೇರಿದಂತೆ ನಾನಾ ಮಾಡೆಲ್ ಕಾರುಗಳು, ಸ್ಕೂಟರ್‌ಗಳು ಆಕರ್ಷಕವಾಗಿವೆ.
ರಸ್ತೆಗಿಳಿದ ಹಳೇ ಸುಂದರಿಯರು!:
ಪ್ರದರ್ಶನ ಮಾತ್ರವಲ್ಲ ಶತಮಾನ ಕಂಡರೂ ನಾವಿನ್ನೂ ಸಂಚಾರಕ್ಕೆ ಫಿಟ್ ಅನ್ನುವುದನ್ನು ತೋರಿಸಲು ರಸ್ತೆಗಿಳಿದು ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ರ‌್ಯಾಲಿಯು ಹೆಬ್ಬಾಳ-ಇನ್ಫೋಸಿಸ್ ರಸ್ತೆ- ಭಾರತ್ ಕ್ಯಾನ್ಸರ್ ಆಸ್ಪತ್ರೆ- ರಿಂಗ್ ರಸ್ತೆ- ಹಿನಕಲ್- ಹುಣಸೂರು ರಸ್ತೆ- ಕಲಾಮಂದಿರ- ಹಳೆಯ ಡಿಸಿ ಕಚೇರಿ ರಸ್ತೆ- ರಾಮಸ್ವಾಮಿ ವೃತ್ತ- ಚಾಮರಾಜ ಜೋಡಿ ರಸ್ತೆ - ಊಟಿ ರಸ್ತೆ- ಗಾಲ್ಫ್ ಕೋರ್ಟ್ ಪಕ್ಕದ ರಸ್ತೆ, ಕುರುಬರಹಳ್ಳಿ ವೃತ್ತದ ಬಳಿ ಇರುವ ಬಹರ್ಚಿನ್ ಬಂಗಲೆ ತಲುಪಿತು.
ಬಳಿಕ ಬಹರ್‌ಚಿನ್ ಬಂಗಲೆಯಿಂದ ದೇವೇಗೌಡ ವೃತ್ತ-ಬನ್ನೂರು ರಿಂಗ್ ರಸ್ತೆ-ಮಣಿಪಾಲ್ ಆಸ್ಪತ್ರೆ ಜಂಕ್ಷನ್-ಕೆಆರ್‌ಎಸ್ ರಸ್ತೆ ಜಂಕ್ಷನ್-ಭಾರತ್ ಕ್ಯಾನ್ಸರ್ ಆಸ್ಪತ್ರೆ-ಇನ್ಫೋಸಿಸ್ ರಸ್ತೆ ಮೂಲಕ ಸಾಗಿ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಅಂತ್ಯಗೊಂಡಿತು. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಿಂಟೇಜ್ ಹಾಗೂ ಕ್ಲಾಸಿಕ್ ಕಾರುಗಳನ್ನು ಕಂಡು ನಗರದ ಜನತೆ ಆಶ್ಚರ್ಯದಿಂದ ವೀಕ್ಷಿಸಿ ಆನಂದಿಸಿದರು. ಕೆಲವರು ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net