

ಮೈಸೂರು: ರೈತರ ಭೂಮಿಯನ್ನು ಕಸಿದುಕೊಳ್ಳಲು ಹೆಚ್ಚಿನ ಅವಕಾಶ ಕಲ್ಪಿಸುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು 1961ರಲ್ಲಿ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವರನ್ನು ಭೂಮಿಯ ಒಡೆಯನಾಗಿ ಮಾಡಿದರು. ಆದರೆ, ಬಿಜೆಪಿ ಸರ್ಕಾರ ಈ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದು ಉಳ್ಳವರನ್ನು ಭೂಮಿಯ ಒಡೆಯನಾಗಿ ಮಾಡಲು ಹೊರಟಿದೆ. ಹಾಗಾಗಿ ಸರ್ಕಾರ ತಿದ್ದುಪಡಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ದಸಂಸ ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ರಾಜಣ್ಣ ಇಟ್ನಾ, ಹನುಮಂತ ಬೆಲವತ್ತಾ, ಸುರೇಶ್ ಯರಗನಹಳ್ಳಿ, ರಾಜು ನಿಲವಾಡಿ, ನಾಗರಾಜ್ ಮಲಾರ ಇತರರಿದ್ದರು.