ಮೈಸೂರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಅಗತ್ಯ ಇಲ್ಲ

badagalapura nagendra
Published on

ಮೈಸೂರು: ಪರಿಸರವನ್ನು ಹಾಳು ಮಾಡಿ ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣದ ಅಗತ್ಯ ಇಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.


ಮೈಸೂರು ತಾಲೂಕಿನ ಹುಯಿಲಾಳು ಗ್ರಾಮದ ಬಳಿರುವ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕ್ರಿಕೆಟ್ ಮೈದಾನ ನಿರ್ಮಿಸಲು ಹೊರಟಿರುವುದು ಸರಿಯಲ್ಲ. ಇದರಿಂದ ಪಕ್ಷಿ, ಪ್ರಾಣಿಗಳ ಜೀವನ, ಅಲ್ಲಿಯ ಪರಿಸರಕ್ಕೂ ಧಕ್ಕೆಯಾಗಲಿದೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಕ್ರೀಡಾಂಗಣದ ಅಗತ್ಯ ಏನಿದೆ? ಈ ನಿಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರಯತ್ನಿಸುತ್ತಿದ್ದು, ಇದನ್ನು ವಿರೋಧಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ನಂಜನಗೂಡು ತಾಲೂಕಿನಲ್ಲಿ ಪಾರ್ಲೆ ಕಂಪನಿಗೆ ಭೂಮಿ ನೀಡಿದ ರೈತ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿದರೆ ಸಾಲದು. ಉದ್ಯೋಗ ಕೊಡಿಸಬೇಕು. ಭೂಮಿ ನೀಡುವಾಗಲೇ ರೈತ ಕುಟುಂಬಕ್ಕೆ ಉದ್ಯೋಗ ನೀಡಬೇಕೆಂಬ ಷರತ್ತು ಹಾಕಲಾಗಿದೆ. ಈ ಒಡಂಬಡಿಕೆಯನ್ನು ಕಂಪನಿ ಉಲ್ಲಂಘಿಸಿದೆ.

ಆದ್ದರಿಂದ ಆ ಕಂಪನಿಯನ್ನು ಅಲ್ಲಿಂದ ಎತ್ತಂಗಡಿ ಮಾಡಿಸಬೇಕು. ಇಲ್ಲವೇ ಕಾರ್ಖಾನೆ ಸ್ಥಾಪನೆಗೆ ಭೂಮಿ ನೀಡಿದವರಿಗೆ ಆರಂಭದಲ್ಲೇ ನೇಮಕಾತಿ ಪತ್ರ ನೀಡಬೇಕು. ಒಂದು ವೇಳೆ ಸ್ಥಾಪನೆ ವಿಳಂಬವಾದಲ್ಲಿ ವೇತನ ಕೊಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 6 ತಿಂಗಳು ಆಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ರೈತರಿಗೆ ಸಂಬಂಧಿಸಿದ ಅನೇಕ ಆಶ್ವಾಸನೆಗಳು ಇನ್ನೂ ಈಡೇರಿಸಿಲ್ಲ. ರೈತ ಸಂಘದ ಆಗ್ರಹದ ಮೇರೆಗೆ ಡಿ.19ರಂದು ರೈತ ಮುಖಂಡರ ಸಭೆಯನ್ನು ಕರೆಯಲಾಗುವುದು ಎಂದು ಸರ್ಕಾರ ಭರವಸೆ ನೀಡಿದ್ದು, ಸಕಾರಾತ್ಮಕ ಸ್ಪಂದಿಸದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.


ಕೇಂದ್ರದ ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಇತ್ತೀಚೆಗೆ ನಡೆಸಿದ ರಾಷ್ಟ್ರಾದ್ಯಂತ ಪ್ರತಿಭಟನೆ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಹೋರಾಟದಲ್ಲಿ ಸುಮಾರು 60 ಸಾವಿರ ರೈತರು ಪಾಲ್ಗೊಂಡಿದ್ದರು. ಕೇಂದ್ರದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದರು.


ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಮಂಡಕಳ್ಳಿ ಮಹೇಶ್, ಶಿವಣ್ಣ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net