

ಮಂಡ್ಯ: ದೇಶದಲ್ಲಿ ಕ್ರಿಕೆಟ್, ಟೆನ್ನಿಸ್, ಕುಸ್ತಿ, ಕಬಡ್ಡಿ ಆಟಕ್ಕೆ ಭಾರೀ ಜನಪ್ರಿಯತೆಯಿದೆ. ಈ ನಡುವೆ ಅನೇಕ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಗಳಿವೆ. ಆದರೆ ಅವುಗಳು ಇತ್ತೀಚಿನ ವರ್ಷಗಳಲ್ಲಿ ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್.ಎನ್.ಯೋಗೇಶ್ ಹೇಳಿದರು.
ತಾಲೂಕಿನ ಹೊಸಬೂದನೂರು ಗ್ರಾಮದ ಕಾಶಿವಿಶ್ವನಾಥ ದೇವಾಲಯದ ಆವರಣದಲ್ಲಿ ಆಯೋಜಿಸಿರುವ ಮೈಸೂರು ವಿಭಾಗ ಮಟ್ಟದ ಹೊನಲು-ಬೆಳಕಿನ ಕಬಡ್ಡಿ ಉತ್ಸವಕ್ಕೆ ಚಾಲನೆ ಮಾತನಾಡಿದ ಅವರು, ಆಧುನಿಕ ಕ್ರೀಡೆಗಳಂತೆ ಗ್ರಾಮೀಣ ಕ್ರೀಡೆಗಳು ಸಹ ಬೌದ್ಧಿಕವಾಗಿ ಮತ್ತು ಶಾರೀರಿಕವಾಗಿ ದೇಹಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಆದರೆ, ಅವುಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗದಿರುವುದು ಮಾತ್ರ ದುರಂತ. ಇಂತಹ ಸಂದರ್ಭದಲ್ಲಿ ಹೊಸಬೂದನೂರು ಗ್ರಾಮದ ಯುವಜನತೆ ಕಬಡ್ಡಿ ಪಂದ್ಯಾವಳಿ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ನಮ್ಮ ದೇಶದಲ್ಲಿ ದೇಸಿ ಕ್ರೀಡೆಗಳಿಗೆ ಸಂಸ್ಕೃತಿಯ ಸ್ಪರ್ಶವಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಬಡ್ಡಿ ಬಗ್ಗೆ ವಿಶೇಷ ಪ್ರೀತಿ ಇದೆ. ಈ ಹಿನ್ನೆಲೆಯಲ್ಲಿ ಕಬಡ್ಡಿಯನ್ನು ಜಿಲ್ಲಾ ಕ್ರೀಡೆ ಎಂದು ಆಯ್ಕೆ ಮಾಡಲಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸ್ಥಳೀಯವಾಗಿ ಪ್ರಸಿದ್ಧವಾದ ಕ್ರೀಡೆಗಳನ್ನು ಗುರುತಿಸಿ ಉತ್ತೇಜನ ನೀಡಲಾಗುತ್ತಿದೆ. ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಬೇಕಾಗಿದೆ. ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಸನ್ನದ್ಧುಗೊಳಿಸಬೇಕಾಗಿದೆ ಎಂದರು.
ತಾಪಂ ಮಾಜಿ ಸದಸ್ಯ ಬಿ.ಎನ್.ರಘು, ಗ್ರಾಪಂ ಸದಸ್ಯರಾದ ನಾಗೇಶ್, ಅರುಣಕುಮಾರ್, ಶಿಲ್ಪಾ, ಮುಖಂಡರಾದ ಜಯರಾಂ, ಚಂದ್ರಪ್ಪ, ರವಿ, ಶಂಕರ್, ಶೇಖರ್, ಕುಮಾರ್, ಆಯೋಜಕರಾದ ಮಂಜು, ಚೈತ್ರೇಶ್ ಇದ್ದರು.