ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದಿಂದ ನಗರದಲ್ಲಿ ನೌಕಾಪಡೆ ದಿನ ಆಚರಣೆ

9
Published on

ಮೈಸೂರು:  ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದಿಂದ ನಗರದಲ್ಲಿ ಭಾನುವಾರ ನೌಕಾಪಡೆ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 1965 ಮತ್ತು 1971ರ ಇಂಡೋ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ನೌಕಾಸೇನೆಯ ನಿವೃತ್ತ ಯೋಧರಾದ ಉಜಿರೆಯ 78 ವರ್ಷದ ಎ.ಕೆ.ಶಿವನ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸೈನಿಕರೂ ಆದ ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ದೇಶದ ನಿಜವಾದ ನಾಯಕರಾದ ಸೈನಿಕರು ರಾಜಕೀಯಕ್ಕೆ ಬರುವ ಅವಶ್ಯಕತೆ ಇದೆ. ನಾನು ನಿವೃತ್ತ ಯೋಧನಾಗಿದ್ದು, ಸೈನಿಕರು ನಿವೃತ್ತರಾದ ನಂತರ ಜೀವನ ಸಾಗಿಸುವುದು ಎಷ್ಟು ಕಷ್ಟ. ಸಮಾಜದಲ್ಲಿ ನಮ್ಮನ್ನು ಕೇಳುವವರೇ ಇರುವುದಿಲ್ಲ. ಆದ್ದರಿಂದ ಸೈನಿಕರು ರಾಜಕೀಯಕ್ಕೆ ಬಂದರೆ ಧ್ವನಿ ಎತ್ತಲು ಸುಲಭವಾಗುತ್ತದೆ ಎಂದರು.

ಎಲ್ಲ ಹಂತದ ಮಾಜಿ ಸೈನಿಕರಿಗೆ ಜಮೀನು ನೀಡಬೇಕು. ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು. ನಿವೃತ್ತ ಸೈನಿಕರಿಗೆ ಅವರ ಊರಿನಲ್ಲಿಯೇ ವಿವಿಧ ಇಲಾಖೆಯಲ್ಲಿ ಕೆಲಸ ನೀಡಬೇಕೆಂದು ಈಗಾಗಲೇ ಆಗ್ರಹಿಸಿದ ಹಿನ್ನೆಲೆಯಲ್ಲಿ ಎಲ್ಲವೂ ಸಾಕಾರಗೊಂಡಿದೆ. ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಪೆನ್ಷನ್ ಯೋಜನೆಯಿಂದ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.

ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದ ಅಧ್ಯಕ್ಷ ಗಜಾನನ ಟಿ.ಭಟ್, ಪ್ರಸ್ತುತ ಸಾಲಿನಲ್ಲಿ ಸಂಘದಿಂದ ನಡೆದ ಕಾರ್ಯಕ್ರಮಗಳ ವಿವರಗಳನ್ನು ಸಭೆಯ ಮುಂದಿರಿಸಿ, ನಿವೃತ್ತ ನೌಕಾಪಡೆ ಸೈನಿಕರಿಗೆ ಪಿಂಚಣಿ ಪಡೆಯಲು ಅಗತ್ಯವಾದ ಲೈಫ್ ಸರ್ಟಿಫಿಕೇಟ್, ರಕ್ತದಾನ ಶಿಬಿರ, ನೌಕಾಪಡೆ ಸಪ್ತಾಹ ಮತ್ತಿತರ ವಿಷಯಗಳ ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಾಲಿ ಸೋಮಣ್ಣ ಮಾತನಾಡಿ, 1971ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಪ್ರಾರಂಭಿಸಿದ ನೆನಪಿಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಯೋಧರನ್ನು ಸ್ಮರಿಸುವ ಸಲುವಾಗಿ ಆಚರಿಸುವ ನೌಕಾಪಡೆ ದಿನವನ್ನು ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದಿಂದ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಶ್ಲಾಘಿಸಿದರು.

ಹಾಸನದ ಸುಪ್ರೀಂ ಫರ್ನೀಚರ್ ಮಾಲೀಕ ಮೋಹನ್‌ಕುಮಾರ್ ಅವರು ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಸೈನಿಕರ ಸಂಘಕ್ಕೆ 70 ಸ್ಟೂಲ್ಗಳನ್ನು ಉಚಿತವಾಗಿ ನೀಡಿದರು. ಅಡ್ಮಿರಲ್ ಗಾಯಕ್‌ವಾಡ್, ಮೈಸೂರು ವಿಭಾಗದ ನಿವೃತ್ತ ನೌಕಾಪಡೆ ಅಧಿಕಾರಿಗಳ ಸಂಘದ ಉಪಾಧ್ಯಕ್ಷ ಕೆ.ವಿ.ಉತ್ತಪ್ಪ, ಅಸಿಸ್ಟೆಂಟ್ ಕಮೀಷನರ್ ನಂದನ್, ಡಿಜಿಸಿಎ ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net