

ಮೈಸೂರು: ಉನ್ನತೀಕರಣಗೊಂಡಿರುವ ನಗರದ ಅಶೋಕಪುರಂ ರೈಲ್ವೆ ನಿಲ್ದಾಣವನ್ನು ನ.15ರಂದು ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಕುರಿತು ನಗರದಲ್ಲಿ ಶುಕ್ರವಾರ ಅಧಿಕಾರಿಗಳ ಜತೆ ಸಭೆ ನಡೆಸಿ ಚರ್ಚಿಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಭಾಗದಲ್ಲಿಯೂ ಸಾಕಷ್ಟು ರೈಲ್ವೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಉನ್ನತೀಕರಿಸಲಾಗಿದೆ. ಇದನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಪ್ರತಿ ವರ್ಷವು 124 ಕಿಮೀ ರೈಲ್ವೆ ಲೈನ್‌ಗಳು ಹೆಚ್ಚಳವಾಗುತ್ತಿದೆ. 333 ಕೋಟಿ ರೂ. ವೆಚ್ಚದಲ್ಲಿ ಮೈಸೂರು ವಿಭಾಗದ 15 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲು ತೀರ್ಮಾನಿಸಲಾಗಿದ್ದು, 2025ಕ್ಕೆ ಈ ಯೋಜನೆಯು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಪ್ರಸ್ತುತ ಮೈಸೂರಿನಿಂದ 80 ರೈಲುಗಳ ಸಂಚಾರವಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆಯಿದೆ. ಜೋಡಿ ರೈಲ್ವೆ ಹಳಿ ಅಗಿರುವುದರಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಇನ್ನಷ್ಟು ರೈಲುಗಳನ್ನು ಓಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಮೈಸೂರು ಭಾಗಕ್ಕೆ 1880ರಲ್ಲಿಯೇ ರೈಲ್ವೆಯನ್ನು ತಂದಿದ್ದ ಮೈಸೂರು ಅರಸರನ್ನು ನೆನೆಸಿಕೊಳ್ಳಬೇಕು. ಅಮೃತ ಬಾರ್ ಯೋಜನೆಯಡಿ 15 ರೈಲ್ವೆ ನಿಲ್ದಾಣಗಳನ್ನು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ನಾಗನಹಳ್ಳಿ ಮೆಮೊ ಕೋಚಿಂಗ್ ಆಗುತ್ತಿದ್ದು, ಮೆಮೋ ರೈಲುಗಳನ್ನು ಮೈಸೂರು, ಚಾಮರಾಜನಗರ, ಬೆಂಗಳೂರು, ತುಮಕೂರಿಗೆ ಇದೇ ತಿಂಗಳ 27 ರಂದು ಉದ್ಘಾಟನೆ ಮಾಡಲಿದ್ದೇನೆ ಎಂದು ಹೇಳಿದರು.
ಹೊಸ ಮಾರ್ಗ ವಿಸ್ತರಣೆ:
ಮೈಸೂರು-ಕುಶಾಲನಗರ ನಡುವೆ 89 ಕಿ.ಮೀ. ರೈಲು ಮಾರ್ಗ ನಿರ್ಮಾಣ ಹಾಗೂ ಬೆಂಗಳೂರಿನ ಹೆಜ್ಜಾಲ-ಮಳವಳ್ಳಿ-ಚಾಮರಾಜನಗರ ಮಾರ್ಗದಲ್ಲಿ ಸುಮಾರು 142 ಕಿ.ಮೀ. ಹೊಸ ರೈಲು ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಸ್ಥಳೀಯ ಜನರಿಗೆ ಹಾಗೂ ಪ್ರಯಾಣಿಕರಿಗೆ ಸಹಾಯವಾಗುತ್ತದೆ. ಅಲ್ಲದೆ ಹಲವಾರು ಪ್ರದೇಶಗಳಿಗೆ ರೈಲಿನ ಸೌಲಭ್ಯ ಸಿಕ್ಕಂತಾಗುತ್ತದೆ ಎಂದರು.
ಬಡವರು ಮತ್ತು ಜನಸಾಮಾನ್ಯರಿಗೆ ಸಹಾಯವಾಗುವಂತೆ ತುಮಕೂರು, ಮಂಡ್ಯ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಮೆಮೊ ರೈಲುಗಳನ್ನು ತರಲಾಗಿದ್ದು, ಇದೇ ತಿಂಗಳ 27ರಂದು ಉದ್ಘಾಟನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸರ್ಕ್ಯುಲರ್ ರೈಲು ಯೋಜನೆಯಲ್ಲಿ ಮೈಸೂರು ಜಿಲ್ಲೆಯು ಒಳಪಟ್ಟಿದ್ದು, ಇದರಿಂದ ಬೆಂಗಳೂರು ಹಾಗೂ ಮೈಸೂರಿಗೆ ಮತ್ತು ಮೆಟ್ರೋಗೆ ನೇರ ಸಂಪರ್ಕವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ ಹೆಚ್ಚು ಸರಕು ಸಾಗಾಣಿಕೆಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೂ ಅನುವು ಮಾಡಿಕೊಡಲಾಗುವುದು ಎಂದರು.
ರೈಲುಗಳಲ್ಲಿ ಮಹಿಳಾ ಭೋಗಿಗಳನ್ನು ಹೆಚ್ಚಿಸುವ ಸಂಬಂಧ ಹಾಗೂ ಸಿಸಿ ಕ್ಯಾಮರಾಗಳನ್ನು ರೈಲುಗಳಿಗೆ ಅಳವಡಿಸುವ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಇದರ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರಿನಂತೆ ಮೈಸೂರಲ್ಲೂ ಅಭಿವೃದ್ಧಿ:
ರಾಜ್ಯದಲ್ಲಿ ಅತಿ ಹೆಚ್ಚು ರೈಲ್ವೆ ಸೌಲಭ್ಯಗಳನ್ನು ಹೊಂದಿರುವ ಬೆಂಗಳೂರು ನಗರದಂತೆಯೇ ಇನ್ನು ಮುಂದೆ ಮೈಸೂರು ನಗರಕ್ಕೂ ರೈಲ್ವೆ ಸೌಲಭ್ಯಗಳು ದೊರಕಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಟಿ.ಎಸ್.ಶ್ರೀವತ್ಸ ಇತರರಿದ್ದರು.