ಸೋತರೂ ಪ್ರಯತ್ನ ಗೆಲುವಿನತ್ತ ಇರಲಿ: ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಸಲಹೆ

1
Published on

ಮಂಡ್ಯ: ಗೆಲ್ಲುವುದಕ್ಕಿಂತ ಮನಃಪೂರಕವಾಗಿ ಆಟವಾಡಬೇಕು. ಸೋತರೂ ಧೃತಿಗೆಡದೇ ನಿಮ್ಮ ಪ್ರಯತ್ನ ಗೆಲುವಿನತ್ತ ಸತತವಾಗಿರಲಿ ಎಂದು ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಸಲಹೆ ನೀಡಿದರು.

ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಪಿಇಟಿ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮೈಸೂರು ವಿಭಾಗದ ಅಂತರ ವಲಯದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 1980ರ ಮುಂಚೆ ನಮ್ಮ ದೇಶದಲ್ಲಿ ಹಾಕಿ ಮತ್ತು ಫುಟ್ಬಾಲ್ ಜನಪ್ರಿಯ ಆಟವಾಗಿತ್ತು. 1983ರಲ್ಲಿ ಮೊದಲ ವಿಶ್ವಕಪ್ ಗೆದ್ದ ಮೇಲೆ ಕ್ರಿಕೆಟ್ ಜನಪ್ರಿಯ ಹೊಂದಿತು. ಪರಿಣಾಮ ಫುಟ್ಬಾಲ್ ಕೊಂಚ ಜನಪ್ರಿಯತೆಯನ್ನು ಕಳೆದುಕೊಂಡಿತು. ಸಾಮಾನ್ಯವಾಗಿ ಫುಟ್ಬಾಲ್ ತಂಡ ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಇರುತ್ತದೆ. ಇಂದಿಗೂ ಯುರೋಪ್ ಮತ್ತು ದಕ್ಷಿಣ ಅಮೆರಿಕದಲ್ಲಿ ಫುಟ್ಬಾಲ್ ಜನಪ್ರಿಯವಾಗಿದೆ ಎಂದರು.

ಪ್ರಾಂಶುಪಾಲ ಡಾ.ಆರ್.ಎಂ.ಮಹಾಲಿಂಗೇಗೌಡ ಮಾತನಾಡಿ, ಪಿಇಟಿ ಕ್ರೀಡಾ ಸಮುಚ್ಚಯವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಲಾಗಿದೆ. ಒಳ ಹಾಗೂ ಹೊರ ಕ್ರೀಡಾಂಗಣ ಸೇರಿದಂತೆ ಬಹುತೇಕ ಎಲ್ಲ ಕ್ರೀಡೆಗಳ ಅಂಕಣವೂ ಇಲ್ಲಿದೆ. ಶಿಕ್ಷಣದ ಜತೆಗೆ ಕ್ರೀಡಾ ಚಟುವಟಿಕೆಗಳೂ ಕೂಡ ಒಂದು ಅವಿಭಾಜ್ಯ ಅಂಗವಾಗಿದೆ. ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರೀಡೆಗೂ ಕೂಡ ಅಂಕಗಳು ಮತ್ತು ಗ್ರೇಡ್‌ಗಳನ್ನು ಕೊಡಬೇಕು ಎನ್ನುವುದು ಸಧ್ಯದ ವಿಷಯವಾಗಿದೆ ಎಂದರು.

ಪಿಇಟಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅನಂತಪದ್ಮನಾಭಪ್ರಭು, ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕಿ ಆರ್.ವಿ.ವಿದ್ಯಾ, ಮೈಸೂರು ವಿಭಾಗದ ವಲಯ ನಿರ್ದೇಶಕ ಡಾ.ಎಂ.ಪಿ.ಮುರಳೀಧರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net