ಮೈಸೂರು: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಸಿರುವುದರಿಂದಾಗಿ ಟ್ರಕ್ ನಿರ್ವಹಣೆ ಮಾಡುವವರಿಗೆ ಭಾರಿ ಹೊಡೆತ ಬಿದ್ದಿದೆ. ಅಲ್ಲದೆ ಟೋಲ್ ದರ, ಟೈರ್, ವಿಮೆ, ಬಿಡಿಭಾಗಗಳ ದರ ಏರಿಕೆಯಾಗಿದ್ದು, ಉದ್ಯಮ ಸಂಕಷ್ಟಕ್ಕೆ ದೂಡಿದೆ. ಸರ್ಕಾರ ಕೂಡಲೇ ತೈಲ ದರ ಏರಿಕೆ ಆದೇಶ ಹಿಂಪಡೆಯಬೇಕು ಎಂದು ಮೈಸೂರು ಜಿಲ್ಲಾ ಟ್ರಕ್ಟ್ ಅಸೋಸಿಯೇಷನ್ ನಗರಾಧ್ಯಕ್ಷ ಶ್ರೀನಿವಾಸರಾವ್ ಒತ್ತಾಯಿಸಿದರು.
ಕಳೆದ ವರ್ಷ ಬರಗಾಲದಿಂದ ಲಾರಿ ಉದ್ಯಮ ತತ್ತರಿಸಿದೆ. ಈಗ ತೈಲ ದರ ಏರಿಕೆ ಮಾಡಿರುವುದರಿಂದಾಗಿ ಸಾಗಣೆ ವೆಚ್ಚ ಹೆಚ್ಚಲಿದೆ. ಇದರ ಹೊರೆ ಸಾಗಣೆ ನೀಡುವ ವ್ಯಾಪಾರಸ್ಥರಿಂದಲೂ ಪಡೆಯಲು ಈಗ ಸಾಧ್ಯವಾಗುತ್ತಿಲ್ಲ. ಜತೆಗೆ ಸಾಗಣೆ ದರ ಏರಿಕೆ ಆದಲ್ಲಿ ಪೈಪೋಟಿ ಮೇಲೆ ಕಡಿಮೆ ದರಕ್ಕೆ ಸಾಗಣೆ ಮಾಡಲು ಮುಂದೆ ಬರುವವರೂ ಇರುವುದರಿಂದಾಗಿ ಸ್ಪರ್ಧೆ ಹೆಚ್ಚಿ ಅನಾರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ ಎಂದು ಹೇಳಿದರು.
ಅಂತಿಮವಾಗಿ ಇದರ ಹೊರೆ ಸಾರ್ವಜನಿಕರ ಮೇಲೆಯೇ ಬೀಳಲಿದ್ದು, ಹಣದುಬ್ಬರವೂ ಏರಲಿದೆ. ಆದ್ದರಿಂದಾಗಿ ಸರ್ಕಾರ ಕೂಡಲೇ ತೈಲ ದರ ಏರಿಕೆ ಆದೇಶ ವಾಪಸು ಪಡೆಯಬೇಕು. ಇಲ್ಲದಿದ್ದಲ್ಲಿ ರಾಜ್ಯ ಸಂಘದ ನಿರ್ಧಾರದಂತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಪದಾಧಿಕಾರಿಗಳಾದ ಎಂ.ಪಿ. ನಾಗರಾಜ್, ಅಸ್ಗರ್ ಅಲಿಖಾನ್, ಲಿಂಗರಾಜು, ಪ್ರಕಾಶ್ ಇದ್ದರು.