

ಮೈಸೂರು: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಹತ್ಯೆ ಮಾಡಿದ ಅಪರಾಧಿಗೆ 5ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮದ ಕರಿಯಯ್ಯ ಅವರ ಮಗ ಕೆ. ಬಸವರಾಜು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 7-1-2019 ರಂದು ಪತ್ನಿ ಮಮತಾ ಅವರನ್ನು ಹತ್ಯೆ ಮಾಡಿದ್ದ. ಕೆ. ಬಸವರಾಜು ಮೇಲಿನ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಪಿರಿಯಾಪಟ್ಟಣದ ಚೌತಿ ನಿವಾಸಿ ಕರಿಯಯ್ಯನ ಮಗ ಕೆ. ಬಸವರಾಜು ಹಾಗೂ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಭುವನಗಿರಿ ಗ್ರಾಮದ ಬಿ.ಬಿ. ಬಸವರಾಜು ಅವರ ಸಹೋದರಿ ಮಮತಾ ಅವರ ವಿವಾಹ 18-06-2007ರಲ್ಲಿ ನಡೆಯಿತು. ಮದುವೆ ಸಂದರ್ಭ ಒಂದು ಚಿನ್ನದ ಉಂಗುರ, 20,000 ರೂ. ನಗದನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.
ವಿವಾಹ ನಂತರ ಬಸವರಾಜು ಕೆಲಸ ಮಾಡದೆ ತಿರುಗಾಡಿಕೊಂಡಿದ್ದ. ಅಲ್ಲದೆ, ವರದಕ್ಷಿಣೆ ಹಣ ಖರ್ಚು ಮಾಡಿ ಹಾಗೂ ಆಕೆಯ ಉಂಗುರವನ್ನು ಮಾರಾಟ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಅಲ್ಲದೆ ಆಕೆಯ ಶೀಲವನ್ನು ಶಂಕಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ.
2012ರಲ್ಲಿ ಮಮತಾ ಅವರಿಗೆ ಹಿಂಸೆ ನೀಡಿ ಬೆಂಕಿ ಹಚ್ಚಿದ್ದ. ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡ ಮಮತಾ ನಂತರ ಗಂಡನೊಂದಿಗೆ ಹೊಂದಿಕೊಂಡು ಜೀವನ ನಡೆಸಲು ಪ್ರಾರಂಭಿಸಿದರು. 7-1-2019 ರಂದು ಮಮತಾ ಅವರ ಪಸ್ ನರ್ಲ್ಲಿ ಹಣವನ್ನು ನೋಡಿದ ಬಸವರಾಜು ಈ ಹಣ ಎಲ್ಲಿಂದ ಬಂತು? ಯಾರು ನಿನಗೆ ನೀಡಿದರು ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ. ನಂತರ ಆಕೆಯನ್ನು ಜಮೀನಿನ ಬಳಿ ಕರೆದೊಯ್ದು ತಲೆಯ ಭಾಗಕ್ಕೆ ದೊಣ್ಣೆಯಿಂದ ಹೊಡೆದು ನಂತರ ನೇಣು ಬಿಗಿದು ಹತ್ಯೆ ಮಾಡಿದ್ದ.
ಅಪರಾಧಿ ಬಸವರಾಜುಗೆ ಮಹಿಳಾ ದೌರ್ಜನ್ಯಕ್ಕೆ (ಐಪಿಸಿ ಕಲಂ 498-ಎ) 2 ವರ್ಷ ಕಠಿಣ ಶಿಕ್ಷೆ ಹಾಗೂ 2,000 ರೂ. ದಂಡ, ಹತ್ಯೆಗೆ (ಐಪಿಸಿ ಕಲಂ 302) ಜೀವಾವಧಿ ಶಿಕ್ಷೆ ಹಾಗೂ 10,000 ರೂ. ದಂಡ, ವರದಕ್ಷಿಣೆ ನಿಷೇಧ ಕಾಯ್ದೆ ಕಲಂ 3ರ ಅಪರಾಧಕ್ಕೆ 5 ವರ್ಷಗಳ ಶಿಕ್ಷೆ ಮತ್ತು 1,500 ರೂ. ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕಮನ್ ವಾದಿಸಿದರು.