

ಮೈಸೂರು: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಅಲ್ಪ ಪ್ರಮಾಣದ ಮಳೆಯ ಕೊರತೆ ಕಂಡು ಬಂದರೂ ಜನವರಿ ಯಿಂದ ಇಲ್ಲಿಯವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಜಿಲ್ಲೆಯಲ್ಲಿ ಜನವರಿ 1 ರಿಂದ ಆಗಸ್ಟ್ 19ರವರೆಗೆ 537 ಮಿ.ಮೀ. (ವಾಡಿಕೆ ಮಳೆ 483 ಮಿ.ಮೀ.) ಮಳೆಯಾಗಿದ್ದು, ಶೇ.11 ರಷ್ಟು ಹೆಚ್ಚು ಮಳೆ ಸುರಿದಿದೆ. ಕೆ.ಆರ್. ನಗರ ತಾಲೂಕು ಹೊರತು ಪಡಿಸಿದರೆ ಉಳಿದೆಲ್ಲ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಎಚ್.ಡಿ. ಕೋಟೆ ತಾಲೂಕಿನಲ್ಲಿ ಶೇ.50, ಹುಣಸೂರಿನಲ್ಲಿ ಶೇ.9, ಮೈಸೂರಿನಲ್ಲಿ ಶೇ.1, ನಂಜನಗೂಡಿನಲ್ಲಿ ಶೇ.19, ಪಿರಿಯಾಪಟ್ಟಣದಲ್ಲಿ ಶೇ.12, ತಿ.ನರಸೀಪುರದಲ್ಲಿ ಶೇ.21, ಸರಗೂರಿನಲ್ಲಿ ಶೇ.16, ಸಾಲಿಗ್ರಾಮದಲ್ಲಿ ಶೇ.22 ರಷ್ಟು ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಕೆ.ಆರ್. ನಗರ ತಾಲೂಕಿನಲ್ಲಿ ಶೇ.1 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
ಮುಂಗಾರಿನಲ್ಲಿ ಕೊರತೆ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಉತ್ತಮ ಮಳೆ ಸುರಿದರೂ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಜಿಲ್ಲೆಯಲ್ಲಿ ಜೂನ್ 1 ರಿಂದ ಆ.19ರವರೆಗೆ 252 ಮಿ.ಮೀ. ಮಳೆಯಾಗಿದ್ದು (ವಾಡಿಕೆ ಮಳೆ 278 ಮಿ.ಮೀ.), ಶೇ.9 ರಷ್ಟು ಮಳೆಯ ಕೊರತೆ ಕಂಡು ಬಂದಿದೆ. ಮುಂಗಾರು ಅವಧಿಯಲ್ಲಿ ಎಚ್.ಡಿ. ಕೋಟೆ, ನಂಜನಗೂಡು, ತಿ.ನರಸೀಪುರ ತಾಲೂಕುಗಳನ್ನು ಹೊರತು ಪಡಿಸಿ ಉಳಿದೆಲ್ಲ ತಾಲೂಕುಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ.
ಹುಣಸೂರು ತಾಲೂಕಿನಲ್ಲಿ ಶೇ.15, ಕೆ.ಆರ್. ನಗರದಲ್ಲಿ ಶೇ.38, ಮೈಸೂರಿನಲ್ಲಿ ಶೇ.3, ಪಿರಿಯಾಪಟ್ಟಣದಲ್ಲಿ ಶೇ.19, ಸರಗೂರಿನಲ್ಲಿ ಶೇ.4, ಸಾಲಿಗ್ರಾಮದಲ್ಲಿ ಶೇ.14 ರಷ್ಟು ಮಳೆ ಕೊರತೆ ಕಂಡು ಬಂದಿದೆ. ಎಚ್.ಡಿ .ಕೋಟೆ ತಾಲೂಕಿನಲ್ಲಿ ಶೇ.42, ನಂಜನಗೂಡಿನಲ್ಲಿ ಶೇ.31, ತಿ.ನರಸೀಪುರದಲ್ಲಿ ಶೇ.22 ರಷ್ಟು ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮುಂಗಾರು ಅವಧಿಯಲ್ಲಿ ಮಳೆ ಕೊರತೆ ಕಂಡು ಬಂದರೂ ಕೊಡಗು ಹಾಗೂ ವಯನಾಡು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಜಿಲ್ಲೆಯ ಕಬಿನಿ ಜಲಾಶಯ, ಕೊಡಗು ಜಿಲ್ಲೆಯ ಹಾರಂಗಿ, ಮಂಡ್ಯದ ಕೆ.ಆರ್.ಎಸ್. ಜಲಾಶಯ ಭರ್ತಿಯಾಗಿದೆ. ಗರಿಷ್ಠ 2284 ಅಡಿಗಳಷ್ಟು ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಪ್ರಸ್ತುತ 2283.63 ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 26,195 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ನದಿಗೆ 25,000 ಕ್ಯೂಸೆಕ್ ನೀರು ಹರಿಯ ಬಿಡಲಾಗುತ್ತಿದೆ. ಕಾಲುವೆಗೆ 1450 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.