ಅಂತರ್ಜಾತಿ ವಿವಾಹದಲ್ಲಿ ಮೈಸೂರು ಜಿಲ್ಲೆಗೆ ಮೂರನೇ ಸ್ಥಾನ

Marrige vvani
Published on


ಮೈಸೂರು:
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಾತಿ ವಿವಾಹವಾಗುವವರ ಸಂಖ್ಯೆ ಹೆಚ್ಚಾಗುವ ಜತೆಗೆ, ಆ ಜೋಡಿಗಳು ಸರ್ಕಾರದ ಪ್ರೋತ್ಸಾಹಧನ ಸದ್ಬಳಕೆ ಮಾಡಿಕೊಳ್ಳುವಲ್ಲಿಯೂ ಮುಂದಿದೆ.


ಸಾಕಷ್ಟು ಜೋಡಿಗಳು ಸರ್ಕಾರದ ಪ್ರೋತ್ಸಾಹಧನವನ್ನೂ ಪಡೆಯುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 906 ದಂಪತಿ ವಿವಿಧ ವಿವಾಹಗಳ ಯೋಜನೆಯಡಿ ಪ್ರಯೋಜನ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ, ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಿವಾಹ ಯೋಜನೆಯಡಿ ನಾನಾ ಸೌಲಭ್ಯ ಸಿಗುತ್ತಿದ್ದು, ಪರಿಣಾಮ ಹೆಚ್ಚು ಜೋಡಿ ಸರ್ಕಾರಿ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ಸಾಗಿಸುತ್ತಿವೆ. ಮೂರು ವರ್ಷದ ಅಂಕಿ ಅಂಶ ಗಮನಿಸಿದರೆ ಒಟ್ಟು 1089 ಜನ ವಿವಿಧ ವಿವಾಹ ಯೋಜನೆ ಅಡಿ ಅರ್ಜಿ ಹಾಕಿದ್ದು, ಅದರಲ್ಲಿ 906 ದಂಪತಿಗೆ ಪ್ರೋತ್ಸಾಹಧನ ದೊರೆತಿದೆ. ಸರ್ಕಾರದಿಂದ 20 ಕೋಟಿ ರೂ.ಬಿಡುಗಡೆಯಾಗಿದ್ದು, ಜಾತೀಯತೆ ಮತ್ತು ಅಸ್ಪೃಶ್ಯತೆ ವಿರುದ್ಧ ಹೋರಾಡಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಇಲಾಖೆ ತನ್ನದೇ ಕೊಡುಗೆ ನೀಡುತ್ತಿದೆ.
ಹೀಗೆ ಅಂತರ್ಜಾತಿ ವಿವಾಹ ಆಗುವುದರಲ್ಲಿ ಹಾಗೂ ಪ್ರೋತ್ಸಾಹಧನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಮೈಸೂರಿಗೆ ಮೂರನೇ ಸ್ಥಾನ ದೊರೆತಿದ್ದು, ಪ್ರಥಮ ಬೆಂಗಳೂರು, ದ್ವಿತೀಯ ಸ್ಥಾನವನ್ನು ಶಿವಮೊಗ್ಗ ಜಿಲ್ಲೆ ಪಡೆದುಕೊಂಡಿವೆ.

ಸರ್ಕಾರದಿಂದ ಪ್ರೋತ್ಸಾಹಧನ ಪಡೆಯುವವರಲ್ಲಿ ಪರಿಶಿಷ್ಟ ಜಾತಿ ಯುವತಿಯರೇ ಹೆಚ್ಚಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪರಿಶಿಷ್ಟ ಜಾತಿ ಯುವತಿಯರು ಹೆಚ್ಚು ವಿದ್ಯಾವಂತರಾಗುತ್ತಿದ್ದು, ಅಸ್ಪೃಶ್ಯತೆ, ಜಾತೀಯತೆಯಿಂದ ಹೊರಬಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಷ್ಟೋ ಜನರು ಅಂತರ್ಜಾತಿ ವಿವಾಹವಾಗಿ ಸರ್ಕಾರದ ಪ್ರೋತ್ಸಾಹಧನದಿಂದ ಹೊಸ ಉದ್ಯಮ, ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದಿಂದ ಸಿಗುತ್ತಿರುವ ಪ್ರೋತ್ಸಾಹಧನವೂ ಅವರನ್ನು ಗಟ್ಟಿಗೊಳಿಸುತ್ತಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net