

ಮೈಸೂರು: ಜಿಲ್ಲಾ ಪಂಚಾಯಿತಿಗೆ ಸರ್ಕಾರ ನೀಡಿರುವ ಅನುದಾನದಲ್ಲಿ ಒಟ್ಟು 450.14 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಯನ್ನು ಮಂಡಿಸಿ, ಸದಸ್ಯರ ಒಪ್ಪಿಗೆ ಪಡೆಯಲಾಯಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ 2020-21ನೇ ಸಾಲಿನ ಕ್ರಿಯಾ ಯೋಜನೆ ಮಂಡಿಸಿದರು.
ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳಿಗೆ ಒಟ್ಟಾರೆ 1391.25 ಕೋಟಿ ರೂ.ಗಳನ್ನು ಜಿಲ್ಲೆಗೆ ನಿಗದಿಪಡಿಸಲಾಗಿದ್ದು, ಇದರಲ್ಲಿ 450.14 ಕೋಟಿ ರೂ. ಜಿಲ್ಲಾ ಪಂಚಾಯಿತಿಗೆ ಬಂದಿದೆ. ಕಳೆದ ಬಾರಿಯ ಅನುದಾನಕ್ಕಿಂತ ಈ ಸಾಲಿಗೆ ಶೇ.3.26ರಷ್ಟು ಅನುದಾನ ಹೆಚ್ಚಿಸಿರುವ ಸರ್ಕಾರ, 14.23 ಕೋಟಿ ರೂ. ಹೆಚ್ಚುವರಿಯಾಗಿ ನೀಡಿದೆ. ಕೊಟ್ಟಿರುವ ಅನುದಾನದಲ್ಲಿ 158.93 ಕೋಟಿ ರೂ.ಗಳನ್ನು ವೇತನಕ್ಕೆ, 291.20 ರೂ.ಗಳನ್ನು ವೇತನೇತರ ವೆಚ್ಚಕ್ಕೆ ನಿಗದಿಪಡಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಅಧೀನದಲ್ಲಿರುವ 3382 ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಹಲವು ಪ್ರೋತ್ಸಾಹದಾಯಕ ಯೋಜನೆಗಳಲ್ಲಿ 163.76 ಕೋಟಿ ರೂ. ಮೀಸಲಿರಿಸಿದ್ದರೆ, ಮಕ್ಕಳ ಪೌಷ್ಟಿಕ ಆಹಾರ, ಕೆನೆಭರಿತ ಹಾಲು ನೀಡಿ ಆರೋಗ್ಯ ವೃದ್ಧಿಸಲು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಕರೆತರುವ ಯೋಜನೆಗೆ ಈ ಬಾರಿ 80.03 ಕೋಟಿ ರೂ. ಕಾಯ್ದಿರಿಸಲಾಗಿದೆ. ಎಸ್‌ಸಿ, ಎಸ್‌ಟಿ ಹಾಗೂ ಹೆಣ್ಣು ಮಕ್ಕಳ ಶುಲ್ಕ ಮರು ಪಾವತಿಗಾಗಿ 7.5 ಲಕ್ಷ ರೂ. ಪ್ರಸ್ತಾಪಿಸಲಾಗಿದೆ. ಅಲ್ಲದೆ 3.5 ಲಕ್ಷ ರೂ.ಗಳನ್ನು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಾಡಿಗೆ ವಾಹನ ಸೌಲಭ್ಯ ಒದಗಿಸಲು ಮೀಸಲಿರಿಸಲಾಗಿದೆ. ಏಳು ವರ್ಷಗಳಿಂದ ಅಸ್ತಿತ್ವದಲ್ಲಿರುವ ಖಾಸಗಿ ಪ್ರೌಢಶಾಲೆಗಳಿಗೆ 73.7 ಕೋಟಿ ರೂ. ಸಹಾಯಾನುದಾನ ಒದಗಿಸಲಾಗಿದ್ದು, ವಯಸ್ಕರ ಶಿಕ್ಷಣಕ್ಕಾಗಿ 30.6 ಲಕ್ಷ ರೂ. ನಿಗದಿಪಡಿಸಲಾಗಿದೆ.
ಉದ್ಯೋಗ ಖಾತ್ರಿ: ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2,65,117 ಜನರು ನೋಂದಣಿ ಮಾಡಿಸಿಕೊಂಡಿದ್ದು, 2,52,469 ಜನರಿಗೆ ಜಾಬ್ ಕಾರ್ಡ್ ವಿತರಿಸಲಾಗಿದೆ. ಕಳೆದ ಸಾಲಿನಲ್ಲಿ 1,05,685 ಕಾರ್ಮಿಕರಿಗೆ ಉದ್ಯೋಗ ಒದಗಿಸಿ 22,65,442 ಮಾನವ ದಿನಗಳ ಉದ್ಯೋಗ ಸೃಷ್ಟಿಸಿ 104.49 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಈ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳನ್ನು ನಿಗದಿಪಡಿಸಿದ್ದು, ಶೇ.100 ಪ್ರಗತಿ ಸಾಧಿಸುವ ಗುರಿ ಇಟ್ಟುಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 32 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮಂಜೂರಾತಿ ದೊರೆತಿದೆ. ಇದರಲ್ಲಿ ಕಳೆದ ವರ್ಷ 30 ಯೋಜನೆಗಳನ್ನು ಪೂರ್ಣಗೊಳಿಸಿ 763 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸಲಾಗುತ್ತಿದೆ. 2020-21ನೇ ಸಾಲಿಗೆ ಎರಡು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಹೆಚ್ಚುವರಿಯಾಗಿ 75 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿ ಒಟ್ಟು 93.53 ಕೋಟಿ ರೂ. ಹಂಚಿಕೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಕುಡಿಯುವ ನೀರಿಗೆ ಆದ್ಯತೆ