ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ

2
Published on

ಮೈಸೂರು: ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಪ್ರೈ.ಲಿನ ಆಡಳಿತ ಮಂಡಳಿ ನಿಯಮ ಬಾಹಿರವಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುತ್ತಿದೆ ಎಂದು ಆರೋಪಿಸಿ ಮೈಸೂರು ಡಿಸ್ಟ್ರಿಕ್ಟ್ ಜನರಲ್ ಎಂಪ್ಲಾಯೀಸ್ ಯೂನಿಯನ್‌ನಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ಕಾರ್ಯಕರ್ತರು, ಕಂಪನಿ ಆಡಳಿತ ಮಂಡಳಿ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಸಂಘ ಕಟ್ಟಿದ ಕಾರಣಕ್ಕಾಗಿ 90 ಕಾರ್ಮಿಕರನ್ನು ತಿರುಪತಿ ಬಳಿ ಇರುವ ತಮ್ಮ ಮತ್ತೊಂದು ಕಾರ್ಖಾನೆಗೆ ವರ್ಗ ಮಾಡಲಾಯಿತು. ಈಗ ಕೋವಿಡ್-19ನ ಲಾಕ್‌ಡೌನ್ ಬಳಿಕ ಅಲ್ಲಿದ್ದವರನ್ನು ಮೈಸೂರಿಗೆ ಕರೆಸಿಕೊಂಡು ತಿರುಪತಿ ಕಾರ್ಖಾನೆಯನ್ನು ಮುಚ್ಚಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮೈಸೂರಿನಲ್ಲಿಯೂ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ಈ ಹಿಂದೆ ಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನದ ಒಡಂಬಡಿಕೆಯನ್ನು ಆಡಳಿತ ಮಂಡಳಿ ಉಲ್ಲಂಘಿಸಿದೆ. ಇದರಿಂದ ಕಾರ್ಖಾನೆ ವೃತ್ತಿ ನಂಬಿಕೊಂಡಿರುವ ಕಾರ್ಮಿಕರು ಅತಂತ್ರರಾಗಿದ್ದು, ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಶಶಿಕಿರಣ್, ಪಿ.ಎನ್.ಸತೀಶ್, ದೇವರಾಜ್, ಭವ್ಯ, ಜೆ.ಮಹೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net