

ಮೈಸೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಅಡಿಯಲ್ಲಿ ಬಿದಿರು ಬೇಸಾಯ ಮಾಡುವ ಕಾರ್ಯಕ್ರಮಕ್ಕೆ ರಾಜ್ಯದ 8 ಜಿಲ್ಲೆಗಳು ಆಯ್ಕೆಗೊಂಡಿದ್ದು, ಅದರಲ್ಲಿ ಮೈಸೂರು ಜಿಲ್ಲೆ ಕೂಡ ಒಳಗೊಂಡಿದೆ. ಇದರ ಲಾಭವನ್ನು ಜಿಲ್ಲೆಯ ರೈತರು ಪಡೆಯಬೇಕು ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಅರಣ್ಯ ಕೃಷಿ ವಿಭಾಗದ ಪ್ರಾಧ್ಯಾಪಕ ಡಾ.ರಾಮಕೃಷ್ಣ ಹೆಗಡೆ ಸಲಹೆ ನೀಡಿದರು.
ಸಹಜ ಸಮೃದ್ಧ ಸಂಸ್ಥೆ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಿದಿರು ಬೇಸಾಯ’ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಬಿದಿರು ಸೇರಿದಂತೆ ಯಾವುದೇ ಬೆಳೆಗಳನ್ನು ಬೆಳೆಯುವ ಮುನ್ನ ಅದರ ಲಾಭ ನಷ್ಟವನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕು. ಯೂಟ್ಯೂಬ್‌ನಲ್ಲಿ ಬರುವ ಯಶೋಗಾಥೆಯಲ್ಲಿ ರೈತರು ಎದುರಿಸಿದ ಸಂಕಷ್ಟಗಳ ವಿವರ ಇರುವುದಿಲ್ಲ, ಕೇವಲ ಸಾಧನೆಯ ಮಾಹಿತಿ ಮಾತ್ರ ಇರುತ್ತದೆ. ಹೀಗಾಗಿ ಸರಿಯಾದ ಮಾಹಿತಿ ಇಲ್ಲದೆ ಕೃಷಿ ಮಾಡಿದರೆ ಸಂಕಷ್ಟ ಎದುರಿಸ ಬೇಕಾಗುತ್ತದೆ ಎಂದರು.
ಬಿದಿರು ಕುರಿತು ಸರಿಯಾದ ಮಾಹಿತಿ ಪಡೆಯದೆ ಕೃಷಿ ಮಾಡಿದ ರೈತರು ಆರ್ಥಿಕ ನಷ್ಟ ಅನುಭವಿಸಿದ ಉದಾಹರಣೆಗಳು ಇವೆ. ಹಾಗಾಗಿ ಜಿಲ್ಲೆಯ ಹವಾಗುಣಕ್ಕೆ ಹೊಂದಾಣಿಕೆಯಾಗುವ ಬಿದಿರಿನ ತಳಿಗಳನ್ನು ಮಾತ್ರ ಬೆಳೆಯಬೇಕು. ಇಲ್ಲವಾದರೆ ಬಿದಿರು ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಹೊಂದದೆ ರೈತರು ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಒಟ್ಟು 136 ಜಾತಿಯ ಬಿದಿರುಗಳು ಇದ್ದು, ಈ ಪೈಕಿ 20 ವಾಣಿಜ್ಯ ಜಾತಿಯ ಬಿದಿರುಗಳು ಇವೆ. ಜಿಲ್ಲೆಯಲ್ಲಿ ಸೀಮೆ ಬಿದಿರು, ಆಸ್ಪರ್ ಬಿದಿರು, ಲಾಠಿ ಬಿದಿರು, ಭೀಮಾ ಬಿದಿರು, ಟುಲ್ಡಾ ಬಿದಿರು, ಗಡುವಾ ಬಿದಿರು ಸೇರಿದಂತೆ ಹತ್ತು ತಳಿಯ ಬಿದಿರುಗಳನ್ನು ಬೆಳೆಯಬಹುದು. ಈ ಎಲ್ಲ ತಳಿಗಳ ಬಿದಿರಿಗೆ ಉತ್ತಮವಾದ ಮಾರುಕಟ್ಟೆ ಇದೆ. ಆಸ್ಪರ್ ಬಿದಿರು ಸಿಹಿಯಾದ ಬಿದಿರಾಗಿದ್ದು, ಇದರ ಕಣಿಲೆಯನ್ನು ಆಹಾರವಾಗಿ ಉಪಯೋಗಿಸಬಹುದು. ಬೇರೆ ಬಿದಿರಿನ ಕಣಿಲೆಯನ್ನು ನೇರವಾಗಿ ಬಳಕೆ ಮಾಡಲು ಸಾಧ್ಯವಿಲ್ಲ, ಎರಡು ಮೂರು ದಿನ ನೀರಿನಲ್ಲಿ ನೆನೆ ಹಾಕಿ ನಂತರ ಬಳಸಬೇಕು. ಆದರೆ, ಆಸ್ಪರ್ ಬಿದಿರಿನ ಕಣಿಲೆಯನ್ನು ನೇರವಾಗಿ ಬಳಸಬಹುದು. ಟುಲ್ಡಾ ಬಿದಿರನ್ನು ಗಂಧದ ಕಡ್ಡಿಯ ಕಡ್ಡಿ ತಯಾರಿಕೆಗೆ ಬಳಕೆ ಮಾಡಬಹುದು. ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಚೀನಾದಿಂದ ಬಿದಿರು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿದೆ. ಇದರ ಲಾಭವನ್ನು ಇಲ್ಲಿಯ ರೈತರು ಪಡೆಯಬೇಕು ಎಂದರು.
ಬಿದಿರು ಸಸಿ ನೆಟ್ಟು 4 ವರ್ಷ ಕಳೆದರೆ ಒಂದು ಹಿಂಡಲ್ಲಿ 18 ರಿಂದ 20 ಬಿದಿರಿನ ಗಳಗಳು ಕಟಾವಿಗೆ ದೊರೆಯುತ್ತದೆ. ಒಂದು ಗಳಕ್ಕೆ 50 ರಿಂದ 60 ರೂ. ದೊರೆಯುತ್ತದೆ. ಆರಂಭದಲ್ಲಿ ಬಿದಿರನ್ನು ಏಕ ಬೆಳೆಯಾಗಿ ಬೆಳೆಯುವ ಬದಲು ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಯಬೇಕು. ಬೆಳೆದಿರುವ ಬಿದಿರಿಗೆ ಉತ್ತಮ ಮಾರುಕಟ್ಟೆ ಕಂಡುಕೊಂಡ ನಂತರ ಹಂತ ಹಂತವಾಗಿ ಬಿದಿರಿನ ಬೇಸಾಯದ ಪ್ರಮಾಣ ಹೆಚ್ಚು ಮಾಡಬಹುದು ಎಂದು ಸಲಹೆ ನೀಡಿದರು.
ಚೀನಾದ ಲೋಸೋ ಬಿದಿರಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ, ಆ ಬಿದಿರನ್ನು ವಾತಾವರಣದ ಕಾರಣಕ್ಕೆ ಇಲ್ಲಿ ಬೆಳೆಯಲು ಸಾಧ್ಯವಿಲ್ಲ. ಆದರೆ, ಅದೇ ಮಾದರಿಯ ಬೇರೆ ತಳಿಗಳನ್ನು ಬೆಳೆಸಬಹುದು. ರೈತರಿಗೆ ಉತ್ತಮ ಇಳುವರಿ ನೀಡುವ ಹಾಗೂ ಹೆಚ್ಚು ಆದಾಯ ತಂದು ಕೊಡುವ ಬಿದಿರುಗಳ ಕುರಿತು ನಿರಂತರವಾಗಿ ಸಂಶೋಧನೆ ನಡೆಯುತ್ತಿದೆ ಎಂದರು.
ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ನಿವೃತ್ತ ಮುಖ್ಯ ವಿಜ್ಞಾನಿ ಡಾ.ಕೆ.ಕೆ. ಸೀತಾಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿದಿರು ನಮ್ಮ ಬದುಕು ಹಾಗೂ ಸಂಸ್ಕೃತಿಯ ಒಂದು ಭಾಗವಾಗಿದ್ದು, ವೇದ ಕಾಲದಲ್ಲಿಯೇ ಬಿದಿರಿನ ಉಲ್ಲೇಖಗಳನ್ನು ಕಾಣಬಹುದು. ಪ್ರಾಚೀನ ಕಾಲದಲ್ಲಿ ಬಿದಿರನ್ನು ಮೆಡಿಕಲ್ ಸರ್ಜಿಕಲ್ ಟೂಲ್ ಆಗಿ ಬಳಕೆ ಮಾಡಲಾಗುತಿತ್ತು. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲೂ ಬಿದಿರಿನ ಉಲ್ಲೇಖವಿದ್ದು, ಇದನ್ನು ಆದಾಯದ ಒಂದು ಮೂಲ ಎಂದು ಪರಿಗಣಿಸಲಾಗಿದೆ ಎಂದರು.
ವಿಶ್ವದಲ್ಲಿ ಹಲವಾರು ಬಿದಿರಿನ ತಳಿಗಳು ಇದ್ದು, ನಮ್ಮ ವಾತಾವರಣಕ್ಕೆ ಹೊಂದಿಕೊಳ್ಳುವ ಉತ್ತಮ ತಳಿಗಳನ್ನು ರೈತರು ಆಯ್ಕೆ ಮಾಡಿ ಕೊಳ್ಳಬೇಕು. ಕೇವಲ ವಾಣಿಜ್ಯ ಬಳಕೆಗೆ ಮಾತ್ರವಲ್ಲದೆ ಅಲಂಕಾರಿಕವಾಗಿಯೂ ಬೆಳೆಯುವ ಬಿದಿರಿನ ತಳಿಗಳು ಇವೆ. ಬೇಲಿಗೆ ಬಳಕೆ ಮಾಡುವ ಸಣ್ಣ ಗಾತ್ರದ ಬಿದಿರಿನ ತಳಿಗಳು ಸಹ ದೇಶದಲ್ಲಿ ಇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹನೂರಿನ ಬಿದಿರು ಕೃಷಿಕ ಪಿ.ದಯಾನಂದ, ದಾವಣಗೆರೆಯ ಬಿದಿರು ಸಂರಕ್ಷಕ ಜಬೀವುಲ್ಲಾ, ಸಹಜ ಸಮೃದ್ಧ ಸಂಸ್ಥೆಯ ಸಂಸ್ಥಾಪಕ ಕೃಷ್ಣಪ್ರಸಾದ್ ಇದ್ದರು.