

ಮೈಸೂರು: ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಗುರುವಾರ ಜಿಲ್ಲೆಯ ವಿವಿಧ ನೋಂದಣಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಗರ ಪಾಲಿಕೆ ವಲಯ ಕಚೇರಿ-6 ವ್ಯಾಪ್ತಿಯ ಕರ್ನಾಟಕ ಒನ್ ನೋಂದಣಿ ಕೇಂದ್ರ, ಸಿದ್ದಲಿಂಗಪುರ ಗ್ರಾಮಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಯೋಜನೆ ಜಾರಿ ಕುರಿತು ಸಾರ್ವಜನಿಕರು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಯಾವುದೇ ಅಂತಿಮ ದಿನಾಂಕ ಇಲ್ಲ. ಹಾಗಾಗಿ ಸಾರ್ವಜನಿಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಪ್ರತಿ ಫಲಾನುಭವಿಗೆ ಸಮಯ ನಿಗದಿಪಡಿಸಲಾಗಿರುತ್ತದೆ ಎಂದರು.
ನಿಗದಿತ ಸಮಯದಲ್ಲಿ ಫಲಾನುಭವಿಗಳು ಸೇವಾ ಕೇಂದ್ರಗಳಿಗೆ ಹೋಗಿ ಯಜಮಾನಿಯ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಹಾಗೂ ಯಜಮಾನಿಯ ಗಂಡನ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಯೋಜನೆಗೆ ನೋಂದಾಯಿಸಿಕೊಳ್ಳಬಹುದು ಎಂದರು.
ಈ ಸಂದರ್ಭ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯಿತ್ರಿ ಹಾಗೂ ಇತರರು ಇದ್ದರು.