

ಮೈಸೂರು: ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಂಗಳವಾರ ಭೇಟಿ ನೀಡಿ ಎಲ್ಲ ಹೋಬಳಿಯ ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ಈ ಸಂದರ್ಭ ಆರ್‌ಟಿಸಿ ಕಾಲಂ 3 ಮತ್ತು 9ರಲ್ಲಿರುವ ವ್ಯತ್ಯಾಸಗಳನ್ನು ಸರಿಪಡಿಸುವ ಕಾರ್ಯ ಕುಂಠಿತವಾಗಿರುವುದನ್ನು ಗಮನಿಸಿ ಪ್ರಥಮ ಆದ್ಯತೆಯಲ್ಲಿ ಈ ಕಾರ್ಯ ಸರಿಪಡಿಸಲು ಸೂಚನೆ ನೀಡಿದರು. ತಾಲೂಕು ಕಚೇರಿಯಲ್ಲಿ ಇ-ಆಫೀಸ್ ತಂತ್ರಾಂಶವನ್ನು ಅನುಷ್ಠಾನಗೊಳಿಸಬೇಕು. ಗ್ರಾಮಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ವಿಸ್ತೀರ್ಣ ಹೊಂದಿರಬೇಕು, ಸ್ಮಶಾನಕ್ಕೆ ಹೆಚ್ಚುವರಿ ಜಮೀನು ಅವಶ್ಯವಿದ್ದಲ್ಲಿ ಸರ್ಕಾರಿ ಜಮೀನುಗಳನ್ನು ಕಾಯ್ದಿರಿಸುವ ದಿಸೆಯಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರಿ ಜಮೀನು ಲಭ್ಯವಿಲ್ಲದಿ ದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ಅಟಲ್ ಜೀ ಜನ ಸ್ನೇಹಿ ಕೇಂದ್ರದಲ್ಲಿ ಸ್ವೀಕರಿಸುತ್ತಿರುವ ಅರ್ಜಿಗಳನ್ನು 7 ದಿನಗಳೊಳಗೆ ಕಾನೂನು ಪ್ರಕಾರ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕು. ಭೂಮಿ ತಂತ್ರಾಂಶದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಗಮನಿಸಿ, ನಿರ್ದಿಷ್ಟ ಸಮಯದೊಳಗೆ ಇತ್ಯರ್ಥಪಡಿಸಲು ಹಾಗೂ ಕಚೇರಿಗೆ ಹಾಜರಾಗುವ ಸಾರ್ವಜನಿಕರೊಂದಿಗೆ ಸಕರಾತ್ಮಕವಾಗಿ ಸ್ಪಂದಿಸಿ ಅವರ ಕೆಲಸಗಳನ್ನು ಕಾನೂನು ಚೌಕಟ್ಟಿನಲ್ಲಿ ಯಾವುದೇ ವಿಳಂಬ ಮಾಡದೇ ಮಾಡಿಕೊಡಲು ಸ್ಪಷ್ಟ ನಿರ್ದೇಶನ ನೀಡಿದರು. ಈ ಸಂದರ್ಭ ತಹಶೀಲ್ದಾರ್ ಗಿರೀಶ್ ಹಾಗೂ ಇತರರು ಇದ್ದರು.