ಮೈಸೂರು ಜಿಲ್ಲಾ ಕಸಾಪದಿಂದ ವೈದ್ಯ ದಂಪತಿಗಳಿಗೆ ಸನ್ಮಾನ

3
Published on

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ವೈದ್ಯ ದಂಪತಿಗಳನ್ನು ಸನ್ಮಾನಿಸುವ ಮೂಲಕ ರಾಷ್ಟ್ರೀಯ ವೈದ್ಯರ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ನಗರದ ವಿಜಯನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತಿ-ಪತ್ನಿ ವೈದ್ಯರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಗೌರವಿಸಿದರು.

ವಿಧಾನಪರಿಷತ್ತಿನ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ಅತ್ಯಂತ ಗೌರಯುತವಾದ ವೈದ್ಯಕೀಯ ಕ್ಷೇತ್ರ ಇಂದು ವ್ಯಾಪಾರೀಕರಣವಾಗಿದೆ. ಆದರೆ, ವೈದ್ಯರಿಗೆ ಹಣ ಸಂಪಾದನೆಗಿಂತಲೂ ರೋಗಿಯ ಕ್ಷೇಮವೇ ಮುಖ್ಯ ಎನ್ನುವುದನ್ನು ಮರೆಯಬಾರದು ಎಂದರು.

ಮನುಷ್ಯನಿಗೆ ತನ್ನ ಜೀವಿತಾವಧಿಯಲ್ಲಿ ಒಂದಿಲ್ಲೊಂದು ಕಾಯಿಲೆ ಬರುವುದು ಸಾಮಾನ್ಯ. ಆರೋಗ್ಯದ ತೊಂದರೆ ಹೇಳಿಕೊಂಡು ಬರುವ ರೋಗಿ ಗುಣಮುಖನಾದರೆ ಅದಕ್ಕಿಂತಲೂ ಖುಷಿಯ ವಿಚಾರ ವೈದ್ಯರಿಗೆ ಯಾವುದೂ ಇಲ್ಲ ಎಂದರು.

ರೋಗಿಗೆ ವೈದ್ಯರೊಬ್ಬರ ಬಗ್ಗೆ ನಂಬಿಕೆ ಬಂದು ಬಿಟ್ಟರೆ ಬೇರಾವುದೇ ವೈದ್ಯರ ಬಳಿ ಹೋಗುವುದಿಲ್ಲ. ನಿರ್ದಿಷ್ಟ ಚಿಕಿತ್ಸೆಗಾಗಿ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರೂ ಆ ಮಾಹಿತಿಯನ್ನು ತಮ್ಮ ಇಷ್ಟದ ವೈದ್ಯರ ಬಳಿ ಬಂದು ಮರುಪರಿಶೀಲಿಸುತ್ತಾರೆ. ಅಷ್ಟು ನಂಬಿಕೆಯ ಸಂಬಂಧ ಇರುತ್ತದೆ ಎಂದರು.

ತೆರೆೆಯ ಹಿಂದಿನ ತೊಂದರೆಗಳನ್ನು ನಿವಾರಿಸುವವರು ಯಾರು ಎಂಬುದು ಈ ಬಾರಿಯ ವೈದ್ಯರ ದಿನಾಚರಣೆಯ ಧ್ಯೇಯವಾಗಿದೆ. ಹಿಂದಿನ ಕಾಲದಲ್ಲಿ ಮಲೇರಿಯಾ ದೊಡ್ಡ ರೋಗ ಅನ್ನುವ ಕಾಲ ಇತ್ತು. ಈಗಿನ ವೈದ್ಯಕೀಯ ಸವಾಲುಗಳೇ ಬೇರೆ. ಜನರು ತಮ್ಮ ದೇಹಾರೋಗ್ಯದಲ್ಲಿ ತೊಂದರೆಯಾದರೆ ವೈದ್ಯರ ಬಳಿ ಬರುತ್ತಾರೆ. ಆದರೆ ವೈದ್ಯರಿಗೆ ತೊಂದರೆ ಎದುರಾದರೆ ಯಾರ ಬಳಿಗೆ ಹೋಗುವುದು ಎಂದು ಪ್ರಶ್ನಿಸಿದರು.

ವೈದ್ಯರಾಗಿ ವೃತ್ತಿ ಜೀವನ ಆರಂಭಿಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರೂ ಡಾ.ಬಿದನ್ ಚಂದ್ರ ರಾಯ್ ಅವರು ರೋಗಿಗಳ ಸೇವೆ ಮಾಡುತ್ತಿದ್ದರು. ಹೀಗಾಗಿ ಅವರ ಸ್ಮರಣಾರ್ಥ ರಾಷ್ಟ್ರೀಯ ವೈದ್ಯ ದಿನ ಆಚರಿಸಲಾಗುತ್ತಿದೆ. ಅವರು ಹುಟ್ಟಿದ್ದು 1881ರ ಜುಲೈ 1 ಹಾಗೂ ನಿಧನರಾಗಿದ್ದು 1962ರ ಜುಲೈ 1ರಂದೇ. ಹೀಗಾಗಿ ಜುಲೈ 1ರಂದು ವೈದ್ಯರ ದಿನ ಆಚರಣೆಗೆ ಬಂದಿದೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಮನುಷ್ಯನಿಗೆ ಆರೋಗ್ಯ ಹಾಗೂ ಶಿಕ್ಷಣ ಮುಖ್ಯ. ಹಾಗಾಗಿ ಗ್ಯಾರಂಟಿ ಯೋಜನೆಗಳಿಗಿಂತ ಶಿಕ್ಷಣ ಹಾಗೂ ಆರೋಗ್ಯವನ್ನು ಉಚಿತವಾಗಿ ನೀಡಬೇಕು. ಆದರೆ ಇದನ್ನು ನೀಡಲು ಸಾಧ್ಯವಾಗದೆ ಇರುವುದು ವಿಷಾದನೀಯ ಎಂದರು.

ಕವಯಿತ್ರಿ ಡಾ.ಲತಾ ರಾಜಶೇಖರ್, ಸಮಾಜ ಸೇವಕಿ ಡಾ.ಪುಷ್ಪಾ ಅಯ್ಯಂಗಾರ್, ಸಾಹಿತಿ ಸುಮತಿ ಸುಬ್ರಹ್ಮಣ್ಯ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಮ.ನ.ಲತಾಮೋಹನ್, ಜಂಟಿ ಕಾರ್ಯದರ್ಶಿ ಕೆ.ಕೆಂಪಣ್ಣ, ಖಜಾಂಚಿ ಜಿ.ಪ್ರಕಾಶ್ ಇತರರು ಇದ್ದರು.

ಸನ್ಯಾನಿತ ವೈದ್ಯ ದಂಪತಿಗಳು:

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ, ವೈದ್ಯಕೀಯ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ಸಿ.ಆರ್.ತಿರುಮಲಾಚಾರ್- ನಿವೃತ್ತ ವೈದ್ಯಾಧಿಕಾರಿ ಡಾ.ಟಿ.ಎ.ವೀಣಾ, ಪಶು ವೈದ್ಯ ಇಲಾಖೆ ಉಪನಿರ್ದೇಶಕ ಡಾ.ನಾಗರಾಜು- ಡಾ.ಬಿ.ಎಸ್.ಮಮತಾ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ.ಡಿ.ರಾಜಣ್ಣ- ಎಚ್.ಡಿ.ಕೋಟೆ ಹಿರಿಯ ವೈದ್ಯಾಧಿಕಾರಿ ಡಾ.ಎಚ್.ಎಂ.ಚಂದ್ರಕಲಾ, ನಿವೃತ್ತ ವೈದ್ಯಾಧಿಕಾರಿ ಡಾ.ಪಿ.ಶಿವರಾಜು-ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ಎಂ.ಭಾರತಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಎಲ್.ರವಿ (ಲಕ್ಷ್ಮಣ್)- ಹುಣಸೂರಿನ ಗಿರಿಜನ ಆರೋಗ್ಯ ಘಟಕದ ಹಿರಿಯ ವೈದ್ಯಾಧಿಕಾರಿ ಎಚ್.ಕೆ.ಸೌಮ್ಯಾಶ್ರೀ, ಬಯೋವೆಲ್ ತರಬೇತುದಾರ ಡಾ.ಕೆ.ಜಿ.ಗುರುರಾಜ್- ಗ್ವಾಸ ಚಿಕಿತ್ಸಕಿ ಡಾ.ಸೌಮ್ಯಾ, ಪ್ರಕಾಶ್ ಆಸ್ಪತ್ರೆ ವೈದ್ಯ ಡಾ.ಸಾ.ರಾ.ಧನುಷ್- ಜೆಎಸ್‌ಎಸ್ ಆಸ್ಪತ್ರೆ ವೈದ್ಯೆ ಡಾ.ಶೀತಲ್ ಸುಬ್ಬಯ್ಯ ಸನ್ಮಾನ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net