

ಮೈಸೂರು: ಕತ್ತಲು ಆವರಿಸುತ್ತಿದ್ದಂತೆ ಇತ್ತ ವರ್ಣರಂಜಿತ ಲೋಕವೊಂದರ ಉದಯ. ಹೈಟೆಕ್ ಚಪ್ಪರದ ಅಡಿಯಲ್ಲಿ ಸಂಗೀತದ ಭೋರ್ಗರೆತ. ಈ ಮಧ್ಯೆ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಮನದಾಳದಿಂದ ಬಂದ ಮಾಧುರ್ಯದ ಹಾಡುಗಳಿಗೆ ಯುವ ಸಮೂಹದ ನರ್ತನ!
ನಗರದ ಹೊರವಲಯದ ಉತ್ತನಹಳ್ಳಿಯಲ್ಲಿ ಬಯಲು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ‘ಯುವ ದಸರಾ’ದ 4ನೇ ದಿನದ ಸಂಗೀತ ಸುಧೆಗೆ ಮೈಸೂರಿನ ಯುವ ಜನರು ಮನಸೋತರು. ಸಂಗೀತದ ರಸದೌತಣವನ್ನೇ ಉಣಬಡಿಸಿದ್ದ ‘ಎಆರ್’ ಹಾಡಿಗೆ ಮಾರು ಹೋದ ಯುವ ಮನಸ್ಸುಗಳು ಕೇಕೆ ಹಾಕಿ ಸಂಭ್ರಮಿಸಿದವು.
ಸಂಗೀತ ಮಾಂತ್ರಿಕ ಎ ಆರ್ ಅವರಿಂದ ಪಾಪ್‌ನ ನಿನಾದ ಝರಿ, ಮಾಧುರ್ಯ ಹಾಡಿನ ಹೊಳೆ, ರಾಕ್ ರಿದಂ ಅಬ್ಬರ ಸ್ವರಮೇಳವೇ ಸೃಷ್ಟಿಯಾಯಿತು. ಸಹಸ್ರಾರು ಜನರ ಸಮ್ಮುಖದಲ್ಲಿ ನಾದಲೀಲೆಯ ಅಲೆಯೂ ಅಬ್ಬರಿಸಿತು. ಒಟ್ಟಿನಲ್ಲಿ ಎರಡು ಗಂಟೆ ಕಾಲ ‘ಸಂಗೀತ ಹವಾ’ ಧರೆಗಿಳಿದಿದ್ದು ಸುಳ್ಳಲ್ಲ….!
‘ಜೈ ಹೋ ಜೈ ಹೋ’ ಹಾಡಿನೊಂದಿಗೆ ರಂಗಪ್ರವೇಶ ಮಾಡಿದ ರೆಹಮಾನ್ ಮತ್ತು ಸಹ ಗಾಯಕರು ಏಕಾಏಕಿ ವಿದ್ಯುತ್ ಸಂಚಲನ ಉಂಟು ಮಾಡಿದರು. ‘ಹಲೋ ಮೈಸೂರು’ ಎಂದು ಹೇಳುತ್ತಾ ಪ್ರೇಕ್ಷಕರನ್ನು ಹುರಿದುಂಬಿಸಿದ ಅವರು, ಮುಕ್ಕಾಲ… ಮುಕಾಬುಲಾ ಓ ಲೈಲಾ ಹಾಡಿನೊಂದಿಗೆ ಆರ್ಭಟಿಸಿದರು.
ಸ್ವದೇಶ್ ಸಿನಿಮಾದ ‘ಯೆ ಜೋ ದೇಸ್ ಹೈ ತೇರಾ’, ದಿಲ್ ಸೇ ಚಿತ್ರದ ‘ದಿಲ್ ಸೆ ರೇ’, ಓ ನೇ ದೋ ದಿಲ್ ಕೋ ಫನ್…ಹೀಗೆ ವಿಶಿಷ್ಟ ಹಾಡುಗಳು ಅವರ ಕಂಠಸಿರಿಯಿಂದ ಮೂಡಿ ಬಂದವು.
ಸಂಗೀತದ ನೇರ ಪ್ರಸಾದವನ್ನು ಆಸ್ವಾದಿಸಿದ ಶ್ರೋತೃಗಳು ಈ ಹಾಡುಗಳಿಗೆ ಕಿವಿಯಾದರು. ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ಅವರು ‘ಘರ್ ಆಜಾ, ಘರ್ ಆಜಾ’, ದಿಲ್ಲಿ ಸಿನಿಮಾದ ‘ಮಸಕ್ಕಲಿ ಮಸಕ್ಕಲಿ’ ಗೀತೆಗೆ ಯುವ ಮನಸ್ಸುಗಳು ತಲೆದೂಗಿದವು.
‘ಜಿಯಾ ಜಲೆ, ಜಿಯಾ ಜಲೆ….ದಿಲ್ ಸೇ ಸಿನಿಮಾದ ಮತ್ತೊಂದು ಜನಪ್ರಿಯ ಗೀತೆಯನ್ನು ಶ್ವೇತಾ ಮೋಹನ್ ಸೊಗಸಾಗಿ ಹಾಡಿದ್ದರೆ, ಅದಕ್ಕೆ ತಕ್ಕಂತೆ ಕಲಾವಿದರು ಮೋಹಕವಾಗಿ ನರ್ತಿಸಿದರು.
ಲಗಾನ್ ಸಿನಿಮದ ‘ರಾಧ ಕೆ ಸೇ ನಾ ಚಲೇ‘ ಗೀತೆಗೆ ರೆಹಮಾನ್‌ಗೆ ರಕ್ಷಿತಾ ಸುರೇಶ್ ಧ್ವನಿಯಾದರು. ಬಳಿಕ ಗುರು ಚಿತ್ರದ ದಮ್ ದಮ್ ದರ್ ದರ್ ಮಸ್ತ್ ಮಸ್ತ್ ಗೀತೆಯು ಸಭಿಕರನ್ನು ರಾಗಲಹರಿಯ ಅಲೆಯಲ್ಲಿ ತೇಲಿಸಿತು. ಶಿವಮಣಿ ಡ್ರಮ್ ಮ್ಯಾಜಿಕ್ ಇಡೀ ಜನಸಮೂಹ ತಲೆದೂಗಿತು.
ಕನ್ನಡದ ಗಾಯಕದ ವಿಜಯ್ ಪ್ರಕಾಶ್ ಸಂಗೀತಸುಧೆಯನ್ನು ಹರಿಸಿದರು. ಈ ನಡುವೆ ಮಾತಿಗಿಳಿದ ಅವರು, ‘ರೆಹಮಾನ್ ಅವರೊಂದಿಗೆ ಪ್ರಪಂಚ ಸುತ್ತಿ ಬಹಳಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವೆ. ಆದರೆ, ಇಂದು ನನಗೆ ವಿಶೇಷ ದಿನ. ಹುಟ್ಟಿ ಬೆಳೆದ ಮೈಸೂರಿನ ಮಣ್ಣಿನಲ್ಲಿ ಇವರೊಂದಿಗೆ ಹಾಡುತ್ತಿರುವುದು ಜೀವನದ ಮಹತ್ವದ ಕ್ಷಣ’ ಎಂದು ಹೆಮ್ಮೆಯಿಂದ ಹೇಳಿ ಹಾಡು ಮುಂದುವರಿಸಿದರು.
ರೋಜಾ ಸಿನಿಮಾದ ‘ರೋಜಾ ಜಾನೇ ಮನ್ ತು ಹಿ ಮೇರಾ ದಿಲ್’, ಬಾಂಬೆ ಚಿತ್ರದ ‘ಕೇ ಹನಾ ಹಿ ಕ್ಯಾ’ ಗಾಯನದ ಇಂಪು ಮನತಟ್ಟಿತು. ಎನ್ನ ಸೋನಾ, ಎನ್ನ ಸೋನಾ ರಬ್ ನೇ ಬನಾಯಾ ಗೀತೆಗೆ ಅಮಿನ್, ಶ್ವೇತಾ, ರಕ್ಷಿತಾ ಜೀವತುಂಬಿ ಹಾಡಿ ನೆರೆದವರನ್ನು ರಂಜಿಸಿದರು.
ಸ್ವಂತ ಊರಿನಲ್ಲಿ ಸಹಸ್ರಾರು ಜನರ ಸಮ್ಮುಖದಲ್ಲಿ ಹಾಡುವಾಗ ಕೊಂಚ ಗಲಿಬಿಲಿಗೊಂಡಿದ್ದ ರಕ್ಷಿತಾ ಸುರೇಶ್ ಕೆಲ ಹೊತ್ತಿನ ಬಳಿಕ ಸುಧಾರಿಸಿಕೊಂಡು ಮಾತನಾಡಿ, ‘ನಾನು ಮೈಸೂರಿನ ಹುಡುಗಿ. ಜಾಗತಿಕ ಐಕಾನ್ ಆಗಿರುವ ರೆಹಮಾನ್ ಅವರೊಂದಿಗೆ ಅನೇಕ ರಾಷ್ಟ್ರಗಳಿಗೆ ಹೋಗಿ ಕಾರ್ಯಕ್ರಮ ನೀಡಿರುವೆ. ಹುಟ್ಟಿದ ಊರಿನಲ್ಲಿ ಹಾಡುತ್ತಿರುವುದಕ್ಕೆ ಹೆಚ್ಚಿನ ಸಂತಸ ತಂದಿದೆ ಎಂದು ಹೆಮ್ಮೆಯಿಂದ ಹೇಳಿ ಚಪ್ಪಾಳೆ ಗಿಟ್ಟಿಸಿದರು.
‘ಮೈಸೂರು ಸುಂದರ. ಸ್ವಚ್ಛ ನಗರಿ’ ಎಂದ ಎ ಆರ್ ಅವರು, ಸ್ವಲ್ಪ ಮೈಸೂರು ಪಾಕ್ ಕಳುಹಿಸಿ ಕೊಡಿ ಎಂದು ವಿಜಯ ಪ್ರಕಾಶ್ ಅವರಿಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸಕ್ಕರೆ ಹೆಚ್ಚಿದ್ದರೆ ನಡೆಯುತ್ತದೆಯೇ ಎಂದು ಹಾಸ್ಯ ಚಟಾಕಿ ಹಾರಿಸಿದರು.
ವೇದಿಕೆಯಲ್ಲಿ ವಿಜಯ್ ಮಲ್ಯ ತದ್ರೂಪಿ ಡ್ರಮ್ ವಾದ್ಯ ಕಲಾವಿದರೊಬ್ಬರು ಎಲ್ಲರ ಗಮನ ಸೆಳೆದರು. ಬೃಹತ್ ಎಲ್‌ಇಡಿ ಪರದೆಯಲ್ಲಿ ಇವರ ಚಹರೆಯನ್ನು ತೋರಿಸುತ್ತಿದ್ದಂತೆ ಜನರು ನಕ್ಕರು.
ವಿವಿಐಪಿ ಪ್ರವೇಶ ದ್ವಾರದಲ್ಲೇ ನೂಕುನುಗ್ಗಲು ಏರ್ಪಟ್ಟಿತ್ತು. ಪಾಸ್, ಟಿಕೆಟ್ ಇಲ್ಲದ ಅನಧಿಕೃತ ವ್ಯಕ್ತಿಗಳ ಕಾರುಬಾರು ಹೆಚ್ಚಿತ್ತು. ನಗರದ ಶಾಸಕರೊಬ್ಬರು ತನ್ನ ಬೆಂಬಲಿಗರನ್ನು ಒಳಗೆ ಹೋಗಲು ಅನುವು ಮಾಡಿಕೊಟ್ಟರು. ವೇದಿಕೆ ಪಕ್ಕದಲ್ಲೇ ಪಾಸ್‌ರಹಿತ ವ್ಯಕ್ತಿಗಳು ಆರ್ಭಟ ಕಂಡು ಬಂತು. ಸರ್ಕಾರಿ, ಜನಪ್ರತಿನಿಧಿಗಳ ಕಾರ್‌ನಲ್ಲಿ ಕುಟುಂಬದವರನ್ನು ತುಂಬಿಕೊಂಡು ತಂದು ಬಿಡಲಾಯಿತು. ಎಲ್ಲ ಗ್ಯಾಲರಿಗಳು ತುಂಬಿತುಳುಕುತ್ತಿದ್ದವು. ಬಹಳಷ್ಟು ಜನರು ನಿಂತುಕೊಂಡೇ ಕಾರ್ಯಕ್ರಮವನ್ನು ವೀಕ್ಷಿಸಿದರು.
ರೆಹಮಾನ್ ಸಂಗೀತ ಆಸ್ವಾದಿಸಲು ಜನ ಸಾಗರವೇ ಹರಿದು ಬಂದಿತ್ತು. ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಯುವಕ, ಯುವತಿಯರು, ಮಂಡ್ಯ ಸೇರಿದಂತೆ ವಿವಿಧ ಊರುಗಳಿಂದಲೂ ಸಂಗೀತಾಕ್ತರು, ಸಾರ್ವಜನಿಕರು ಲಗ್ಗೆ ಇಟ್ಟಿದ್ದರು. ಇದರಿಂದ ಇಡೀ ಬಯಲು ಮೈದಾನ ಜನಜಂಗುಳಿ ಭರ್ತಿಯಾಗಿತ್ತು.
ಕಳೆದ ಮೂರು ದಿನಗಳಿಂದ ಇಲ್ಲದ ಟ್ರಾಫಿಕ್ ಸಮಸ್ಯೆ ಇಂದು ಉಲ್ಬಣಗೊಂಡಿತ್ತು. ವಾಹನ ದಟ್ಟಣೆ ಮಿತಿಮಿರಿ ಹೋಗಿತ್ತು. ಸರ್ವೀಸ್ ರೋಡ್, ರಿಂಗ್ ರೋಡ್‌ನಲ್ಲೇ ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡಿದ್ದರಿಂದ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಇದರಿಂದ ವಾಹನ ಸವಾರು ಹೈರಾಣರಾದ್ದರೆ, ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು ಪರದಾಡಿದರು.
ಎಲ್‌ಇಡಿ ಪರದೆಗಳು ಸ್ತಬ್ಧಗೊಂಡಿದ್ದರಿಂದ ಸಭಿಕರಿಗೆ ನಿರಾಶೆಯಾಯಿತು. ವೇದಿಕೆ ಮೇಲಿನ 8 ಬೃಹತ್ ಎಲ್‌ಇಡಿ ದೃಶ್ಯಗಳು ಬಿತ್ತರವಾಗುತ್ತಿತ್ತು. ಆದರೆ, ಜನರ ಮಧ್ಯೆದಲ್ಲಿದ್ದ ಎಲ್‌ಇಡಿ ಪರದೆಗಳು ರಾತ್ರಿ 8.15ರ ಸುಮಾರಿಗೆ ಬಂದ್ ಆದವು. ಬಳಿಕ ಅವುಗಳಿಗೆ ಜೀವ ಬರಲಿಲ್ಲ. ಇದರಿಂದ ದೂರ ಊರಿನಿಂದ ಬಂದಿದ್ದ ಸಾವಿರಾರು ಜನರಿಗೆ ನಿರಾಶೆಯಾಯಿತು.