

ಮಂಜುನಾಥ ಟಿ.ಭೋವಿ ಮೈಸೂರು
ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಮಾತೃಭಾಷೆಯ ಮಕ್ಕಳೇ ಬರಲ್ಲ. ಅಂತಹದರಲ್ಲಿ ಇಲ್ಲಿಯೊಂದು ಕನ್ನಡ ಶಾಲೆಗೆ ಕನ್ನಡೇತರ ಮಕ್ಕಳೇ ಜೀವತುಂಬಿದ್ದು, ಅವರ ಸಂಖ್ಯೆಯೇ ಅಧಿಕ..!
ಇದು 131 ವರ್ಷಗಳ ಚರಿತ್ರೆ ಹೊಂದಿರುವ ಶಿವರಾಮಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷ. ಕನ್ನಡೇತರ ಮಕ್ಕಳಿಂದಲೇ ಈ ಶಾಲೆ ನಡೆಯುತ್ತಿದೆ. ಇಲ್ಲದಿದ್ದರೆ ಎಂದೋ ಇದು ಕಣ್ಣು ಮುಚ್ಚಿ ಹೋಗುತ್ತಿತ್ತು.
ಬರೀ 24 ಮಕ್ಕಳು!:
ದೇವರಾಜ ಮೊಹಲ್ಲಾದಲ್ಲಿರುವ ಕಾರಣಕ್ಕೆ ಇದು ‘ದೇವರಾಜ ಸ್ಕೂಲ್’ ಎಂದೇ ಜನಜನಿತ. ನಗರದ ಬಹುತೇಕ ಸರ್ಕಾರಿ ಶಾಲೆಗಳಂತೆ ಈ ಸ್ಕೂಲ್‌ಗೂ ಮಕ್ಕಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇಲ್ಲಿ ಬರೀ 24 ಮಕ್ಕಳಿದ್ದು, 1ರಿಂದ 7ನೇ ತರಗತಿ ವರೆಗೆ ಕ್ರಮವಾಗಿ 4, 3, 5, 3, 4, 3, 2 ಮಕ್ಕಳು ಮಾತ್ರ ಅಭ್ಯಾಸ ಮಾಡುತ್ತಿದ್ದಾರೆ. ಯಾವುದೇ ಕ್ಲಾಸ್‌ನಲ್ಲೂ ಮಕ್ಕಳ ಸಂಖ್ಯೆ ಎರಡಂಕಿಯನ್ನೂ ಮೀರಿಲ್ಲ. ಇಷ್ಟು ಮಕ್ಕಳಿಗೆ ಮುಖ್ಯಶಿಕ್ಷಕರು ಸೇರಿ ಮೂವರು ಗುರುಗಳಿದ್ದಾರೆಯಷ್ಟೆ.
ಕನ್ನಡೇತರ ಕನ್ನಡ ಪ್ರೇಮ:
ಹೀಗೆ ಏದುಸಿರು ಬಿಡುತ್ತಿರುವ ಈ ಶಾಲೆಗೆ ಆಮ್ಲಜನಕ ನೀಡುವಂತೆ ಕನ್ನಡೇತರ ಮಕ್ಕಳು ಇಲ್ಲಿ ಸೇರಿಕೊಂಡಿದ್ದಾರೆ. ರಾಜಸ್ಥಾನ ಮೂಲದ 15 ಮಕ್ಕಳು, ಉತ್ತರ ಪ್ರದೇಶದ 3 ಮಕ್ಕಳು, ಮೂವರು ಮುಸ್ಲಿಂ ಸಮುದಾಯದ ಮಕ್ಕಳು ಮತ್ತು ಮೂವರು ಮಾವುತರ ಮಕ್ಕಳು ಇಲ್ಲಿದ್ದಾರೆ. ಈ ಪೈಕಿ ಮಾರ್ವಾಡಿ ಸಮುದಾಯದ ಮಕ್ಕಳ ಸಂಖ್ಯೆ ಹೆಚ್ಚಿದೆ. ಇವರ ಮಾತೃಭಾಷೆ ಮಾರ್ವಾಡಿ ಆಗಿದ್ದರೂ ಕನ್ನಡವನ್ನು ಅಪ್ಪಿಕೊಂಡು ಕನ್ನಡ ಕಲಿತಿದ್ದು, ಕನ್ನಡಪ್ರೇಮವನ್ನು ಮೆರೆದಿದ್ದಾರೆ.
‘ಮಾರ್ವಾಡಿ ಮಕ್ಕಳಿಗೆ ಆರಂಭದಲ್ಲಿ ಕನ್ನಡ ಕಲಿಯಲು ಕಷ್ಟಕರವಾಗುತ್ತದೆ. ಕೇವಲ ಆರು ತಿಂಗಳಿನಲ್ಲೇ ಇಲ್ಲಿ ಹೊಂದಿಕೊಂಡು ಕನ್ನಡ ಮಕ್ಕಳಿಗಿಂತ ಚೆನ್ನಾಗಿ ಕನ್ನಡವನ್ನು ಕಲಿಯುತ್ತಿದ್ದಾರೆ. ಇವರಲ್ಲಿ ಬಹಳಷ್ಟು ಮಕ್ಕಳು ಪ್ರತಿಭಾವಂತರಿದ್ದಾರೆ’ ಎಂದು ಸಂತಸದಿಂದ ಹೇಳುತ್ತಾರೆ ಶಾಲಾ ಶಿಕ್ಷಕಿಯರಾದ ಸುನಿತಾ ಮತ್ತು ಸುನಂದಾ ಅವರು.
ಶಾಲೆ ಉಳಿಸಿದ ಮಾರ್ವಾಡಿ ಮಕ್ಕಳು:
ವಾಣಿಜ್ಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿರುವ ಶಿವರಾಮಪೇಟೆಯ ಮಧ್ಯಭಾಗದಲ್ಲೇ ಈ ಜ್ಞಾನದೇಗುಲವಿದೆ. ಇಲ್ಲಿಯ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುವ ರಾಜಸ್ಥಾನ ಮೂಲದ ಮಾರ್ವಾಡಿ ಕುಟುಂಬದವರು ತಮ್ಮ ಮಕ್ಕಳನ್ನು ಇಲ್ಲಿಗೆ ದಾಖಲಿಸಿ ಕನ್ನಡ ಕಲಿಸಲು ಪ್ರೇರಕರಾಗಿದ್ದಾರೆ. ಇದರೊಂದಿಗೆ ಈ ಶಾಲೆಯ ಉಳಿವಿಗೂ ಕಾರಣರಾಗಿದ್ದಾರೆ.
ಶಾಲೆಯತ್ತ ಮುಖ ಮಾಡದ ಸ್ಥಳೀಯರು:
ಸುತ್ತಮುತ್ತಲಿನ ಸ್ಥಳೀಯ ಮಕ್ಕಳು ಈ ಶಾಲೆ ಸೇರುತ್ತಿಲ್ಲ. ಬದಲಿಗೆ ಈ ಪ್ರದೇಶದಲ್ಲಿರುವ ಹತ್ತಾರು ಇಂಗ್ಲಿಷ್ ಕಾನ್ವೆಂಟ್ ಶಾಲೆಗಳತ್ತ ಆಕರ್ಷಿತರಾಗಿದ್ದಾರೆ. ಮನೆ ಮಾತು ಕನ್ನಡವಾಗಿದ್ದರೂ ಅವರ‌್ಯಾರು ಈ ಶಾಲೆಯತ್ತ ತಿರುಗಿಯೂ ನೋಡುತ್ತಿಲ್ಲ. ಪಾಲಕರು ಅಷ್ಟೇ, ದುಬಾರಿ ಶುಲ್ಕ ಕೊಟ್ಟರೂ ಪರವಾಗಿಲ್ಲ, ನಮ್ಮ ಮಕ್ಕಳು ಇಂಗ್ಲಿಷ್ ಓದಬೇಕೆಂಬ ಮನಭಾವ ಹೊಂದಿದ್ದಾರೆ. ಅಲ್ಲದೆ, ಈ ಕ್ಯಾಂಪಸ್‌ನಲ್ಲಿರುವ ಅಂಗನವಾಡಿಯಲ್ಲಿ ಕಲಿತ ಮಕ್ಕಳು ಕೂಡ ಈ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಿಲ್ಲ.
ಒಂದು ಕಾಲದಲ್ಲಿ 1 ಸಾವಿರ ಮಕ್ಕಳು!
ಐತಿಹಾಸಿಕ ಹಿನ್ನೆಲೆ ಇರುವ ಈ ಶಾಲೆ ಮೈಸೂರು ಮಹಾರಾಜರ ಕೊಡುಗೆ. 1890ರಲ್ಲಿ ಇದು ಆರಂಭವಾಗಿದೆ. ಈ ಹಿಂದೆ ಒಂದು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. 20-25 ವರ್ಷಗಳ ಹಿಂದೆಯೂ 500 ಮಕ್ಕಳು ಇಲ್ಲಿದ್ದರು. ಹೀಗಾಗಿ, ಇಲ್ಲಿ ವಿದ್ಯಾರ್ಥಿಗಳ ಜಾತ್ರೆಯೇ ಸೇರುತ್ತಿತ್ತು. ಯಾವಾಗ ಆಂಗ್ಲ ಶಾಲೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವೋ, ಪಾಲಕರಿಗೆ ಇಂಗ್ಲಿಷ್ ವ್ಯಾಮೋಹ ಬೇರೂರಿತೋ ಆಗಿನಿಂದಲೇ ಇಲ್ಲಿಯ ಪ್ರವೇಶಾತಿ ಸಂಖ್ಯೆ ಕುಸಿಯಲು ಪ್ರಾರಂಭಿಸಿತು.
ದತ್ತು ಸ್ವೀಕರಿಸಿ ಶಾಲೆ ಉಳಿಸಿದರು:
ಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್ ನೇತೃತ್ವದ ಕನ್ನಡ ಜನಜಾಗೃತಿ ಸಂಘವು ಈ ಶಾಲೆಯನ್ನು ದತ್ತು ಸ್ವೀಕರಿಸಿ ಇದನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಜತೆಗೆ, ಕಂಪ್ಯೂಟರ್, ಸಮವಸ್ತ್ರ, ಬ್ಯಾಗ್ ಸೇರಿದಂತೆ ಕಲಿಕೆ ಬೇಕಾಗಿರುವ ಎಲ್ಲ ಸೌಲಭ್ಯಗಳನ್ನೂ ಉದಾರವಾಗಿ ಕಲ್ಪಿಸಿಕೊಟ್ಟಿದೆ.
ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಪಾರಂಪರಿಕ ಕಟ್ಟಡ ಈಗಲೂ ಸುಸ್ಥಿತಿಯಲ್ಲಿ ಇದೆ. ಸುತ್ತಲು ಕಾಂಪೌಂಡ್ ಮಾಡಿ ಬಂದೋಬಸ್ತ್ ಮಾಡಲಾಗಿದೆ. ಶೌಚಗೃಹ, 16 ಕೊಠಡಿಗಳು ಸೇರಿ ಖಾಸಗಿ ಶಾಲೆಯಲ್ಲಿರುವ ಎಲ್ಲ ಸವಲತ್ತುಗಳೂ ಇಲ್ಲಿವೆ. ಆದರೆ, ಕಲಿಯಲು ಮಕ್ಕಳು ಮಾತ್ರ ಬರುತ್ತಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಬಹಳಷ್ಟು ಕಸರತ್ತು ಮಾಡಿದ್ದರೂ ಸ್ಥಳೀಯ ಮಕ್ಕಳು ಇಲ್ಲಿ ದಾಖಲಾಗುತ್ತಿಲ್ಲ.
ಬಿಸಿಯೂಟ ಇಲ್ಲೇ ಮೊದಲು:
ಅಕ್ಷರ ದಾಸೋಹ ಯೋಜನೆ ಪ್ರಾರಂಭಕ್ಕೆ ಈ ಶಾಲೆಯೇ ಪ್ರೇರಣೆ. ಇಲ್ಲಿ ಬಿಸಿಯೂಟ ಮೊದಲೇ ಚಾಲ್ತಿಯಲ್ಲಿ ಇತ್ತು. 500 ಮಕ್ಕಳಿಗೆ ದಾನಿಗಳ ಸಹಾಯದಿಂದ ನಿತ್ಯ ಮಧ್ಯಾಹ್ನ ಊಟ ನೀಡಲಾಗುತ್ತಿತ್ತು. ಇಲ್ಲಿಗೆ ಭೇಟಿ ನೀಡಿ ಇದನ್ನು ವೀಕ್ಷಿಸಿದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಶಿಕ್ಷಣ ಸಚಿವರಾಗಿದ್ದ ಎಚ್.ವಿಶ್ವನಾಥ್ ರಾಜ್ಯಾದ್ಯಂತ ಬಿಸಿಯೂಟ ಪ್ರಾರಂಭಿಸಿದರು. ಅಲ್ಲದೆ, ಇಸ್ರೇಲ್ ಶಿಕ್ಷಣ ಸಚಿವರು, ಅಮೆರಿಕ ಶಿಕ್ಷಣ ತಜ್ಞರ ನಿಯೋಗ ಇಲ್ಲಿಗೆ ಭೇಟಿ ನೀಡಿ ಊಟದ ವ್ಯವಸ್ಥೆಯನ್ನು ಗಮನಿಸಿ ಮೆಚ್ಚಿಕೊಂಡಿದೆ.
‘ಮದುವೆ ಮಾಡುವಷ್ಟು ಪಾತ್ರೆ ಸಾಮಗ್ರಿಗಳಿವೆ. ಮಿಕ್ಸಿ, ಗ್ರೈಂಡರ್ ಇನ್ನಿತರ ಉಪಕರಣಗಳು ಇಲ್ಲಿವೆ. ಮಾರುಕಟ್ಟೆಯಿಂದ ಈ ಹಿಂದೆ ಮೂಟೆಗಟ್ಟಲೇ ದಿನಸಿ ವಸ್ತುಗಳನ್ನು ತಂದು ಅಡುಗೆ ಮಾಡಿ ಮಕ್ಕಳಿಗೆ ಬಡಿಸುತ್ತಿದ್ದೆ. ನೂರಾರು ಮಕ್ಕಳು ಊಟ ಮಾಡುತ್ತಿದ್ದರು. ಆದರೀಗ ಅದೆಲ್ಲ ನೆನಪು ಮಾತ್ರ’ ಎಂದು 20 ವರ್ಷದಿಂದ ಇಲ್ಲಿ ಅಡುಗೆ ಮಾಡುತ್ತಿರುವ ಗಂಗಮ್ಮ ಸ್ಮರಿಸಿಕೊಂಡರು.
ತಮಿಳು ಶಾಲೆ ಬಂದ್:
ಇಲ್ಲಿ ಸರ್ಕಾರಿ ತಮಿಳು ಶಾಲೆ ಕೂಡ ಇತ್ತು. ವಿದ್ಯಾರ್ಥಿಗಳ ಕೊರತೆಯಿಂದ ಅದು ಮುಚ್ಚಿದ್ದು, ಇಲ್ಲಿರುವ ಮಕ್ಕಳನ್ನು ಚಾಮರಾಜಪುರಂನ ಆರ್‌ಟಿಒ ಕಚೇರಿ ಬಳಿ ಇರುವ ಸರ್ಕಾರಿ ತಮಿಳು ಶಾಲೆಗೆ ಸೇರಿಸಲಾಗಿದೆ.
ನಳನಳಿಸುವ ಪಿಯುಸಿ ಕಾಲೇಜು:
ಶತಮಾನೋತ್ಸವ ಶಾಲೆ ಸೊರಗುತ್ತಿದ್ದರೆ, ಈ ಕ್ಯಾಂಪಸ್‌ನಲ್ಲಿ 2004ರಲ್ಲಿ ಪ್ರಾರಂಭವಾದ ದೇವರಾಜ ಸರ್ಕಾರಿ ಪಿಯುಸಿ ಕಾಲೇಜು ನಳನಳಿಸುತ್ತಿದೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಬರೋಬ್ಬರಿ 500 ವಿದ್ಯಾರ್ಥಿ ಓದುತ್ತಿದ್ದು, ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಈ ಕಾಲೇಜು ಪ್ರಾರಂಭಿಸಿ, ಸರ್ಕಾರದಿಂದ ಅನುದಾನ, ಹೊಸಕಟ್ಟಡ, ವಿವಿಧ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ಗ್ರಾಮಾಂತರ ಹೆಣ್ಣು ಮಕ್ಕಳ ಪಾಲಿಗೆ ಇದು ಜ್ಞಾನದೇಗುಲವಾಗಿದೆ.
ಮಕ್ಕಳ ಪ್ರವೇಶಾತಿ ಹೆಚ್ಚಿಸಲು ನಾನಾ ಪ್ರಯತ್ನಗಳನ್ನು ಮಾಡಲಾಗಿದೆ. 10 ಮಕ್ಕಳನ್ನು ಸೇರಿಸಿದರೆ ಚಿನ್ನದ ಉಂಗುರ ನೀಡಲಾಯಿತು. ಇದರ ಫಲವಾಗಿ 10 ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ 150 ಆಸುಪಾಸಿನಲ್ಲಿ ಇತ್ತು. ಬಳಿಕ ಈ ಸಂಖ್ಯೆ ಕುಸಿಯುತ್ತಿದೆ. ಶಾಲೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ.
ಡಿ.ನಾಗಭೂಷಣ್, ಕನ್ನಡ ಜನಜಾಗೃತಿ ಸಂಘದ ಮುಖಂಡರು.
ಪ್ರವೇಶಾತಿ ಅಭಾವ ಇದೆಯೆಂಬ ಕಾರಣಕ್ಕೆ ಈಗಿರುವ ಮಕ್ಕಳಿಗೆ ಕಲಿಕೆಯಲ್ಲಿ ಯಾವುದೇ ಕೊರತೆ ಮಾಡಿಲ್ಲ. ಯೋಗ,, ಕ್ರೀಡೆ, ಕಂಪ್ಯೂಟರ್ ತರಬೇತಿ ಸೇರಿ ಎಲ್ಲ ರೀತಿಯ ಪಠ್ಯ-ಪಠ್ಯೇತರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತ್ತಿದೆ.
ಎಚ್.ಮಹಾದೇವ, ಮುಖ್ಯಶಿಕ್ಷಕರು