ಮೈಸೂರು: ವಿವಿಧ ಜಯಂತಿಗಳ ಅರ್ಥಪೂರ್ಣ ಆಚರಣೆಗೆ ನಿರ್ಧಾರ

adc meeting
Published on

ಮೈಸೂರು: ಸಾಧಕರ ಸಂದೇಶಗಳನ್ನು ಸಮಾಜಕ್ಕೆ ಸಾರಲು, ಜೀವನ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಸಲುವಾಗಿ ವಿವಿಧ ಮಹನೀಯರ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಶಂಕರಾಚಾರ್ಯ, ಭಗೀರಥ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಗಳ ಆಚರಣೆ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೇ 2 ರಂದು ಶಂಕರಾಚಾರ್ಯ ಜಯಂತಿಯನ್ನು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗುವುದು. ಅಂದು ಬೆಳಗ್ಗೆ 10ಕ್ಕೆ ಗೀತಾ ಗಾಯನ ಏರ್ಪಡಿಸಲಾಗುವುದು. ಬೆಳಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ ಆಚರಣೆ ನಡೆಸಲಾಗುವುದು ಎಂದರು.

ಮೇ 4 ರಂದು ಭಗೀರಥ ಜಯಂತಿಯನ್ನು ಕರ್ನಾಟಕ ಕಲಾಮಂದಿರದಲ್ಲಿ ಆಚರಣೆ ಮಾಡಲಾಗುವುದು. ಅಂದು ಬೆಳಗ್ಗೆ 9.30ಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯಿಂದ ಕಲಾಮಂದಿರವರೆಗೆ ಮೆರವಣಿಗೆ ನಡೆಸಲಾಗುವುದು. 10.30ಕ್ಕೆ ಗೀತಾ ಗಾಯನ, 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮೇ 10 ರಂದು ಶಿವ ಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಕಿರು ರಂಗಮಂದಿರದಲ್ಲಿ ಬೆಳಗ್ಗೆ 11.30ಕ್ಕೆ ಆಯೋಜಿಸಲಾಗಿದ್ದು, ಬೆ.10ಕ್ಕೆ ಗೀತಾ ಗಾಯನ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಎಲ್ಲ ಸಮುದಾಯದವರು ಸೇರಿ ಜಯಂತಿಗಳ ಆಚರಣೆ ಮಾಡಬೇಕು. ಜಯಂತಿಗಳ ಆಚರಣೆಯ ಉದ್ದೇಶ ಮಹನೀಯರ ಆದರ್ಶಗಳನ್ನು ಪಾಲನೆ ಮಾಡುವುದು ಆಗಿದೆ ಎಂದು ತಿಳಿಸಿದರು.

ಮೆರವಣಿಗೆ ಪ್ರಾರಂಭವಾಗುವ ಸ್ಥಳವಾದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಾಮಿಯಾನ ಸ್ವಚ್ಚತೆ ಹಾಗೂ ಕುರ್ಚಿಗಳ ವ್ಯವಸ್ಥೆ ಹಾಗೂ ಜಯಂತಿಗಳು ನಡೆಯುವ ಸ್ಥಳದ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ತಳಿರು ತೋರಣ ಹಾಗೂ ಊಟದ ಜಾಗಕ್ಕೆ ಶಾಮಿಯಾನ ವ್ಯವಸ್ಥೆಯನ್ನು ನಗರ ಪಾಲಿಕೆಯ ವತಿಯಿಂದ ಮಾಡಬೇಕು. ಸಮುದಾಯದ ಮುಖಂಡರು ತಮ್ಮ ಸಮುದಾಯದ ಬಡವರಿಗೆ ಸಹಾಯ ಮಾಡಬೇಕು. ಸಮುದಾಯದ ಮಕ್ಕಳಿಗೆ ಶೈಕ್ಷಣಿಕ ಸಹಾಯ ಮಾಡಬೇಕು. ಮಹನೀಯರ ವಿಚಾರಧಾರೆಗಳನ್ನು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಜಯಂತಿಗಳನ್ನು ಆಚರಣೆ ಮಾಡಿದಕ್ಕೆ ಒಂದು ಅರ್ಥ ಬರುತ್ತದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಮಾತನಾಡಿ, ಜಯಂತಿಗಳ ಆಚರಣೆಗೆ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ಜನಪ್ರತಿನಿಧಿಗಳಿಗೆ ಮುಖಂಡರಿಗೆ ಆಹ್ವಾನ ನೀಡಲಾಗುವುದು. ಮೆರವಣಿಗೆಗೆ ಕಲಾ ತಂಡಗಳನ್ನು ನೀಡಲಾಗುವುದು. ಕಲಾಮಂದಿರದಲ್ಲಿ ಗೀತಾ ಗಾಯನ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ವಿವಿಧ ಸಮುದಾಯದ ಮುಖಂಡರು ಮಾತನಾಡಿ, ಜಯಂತಿಗಳ ಆಚರಣೆಯ ದಿವ್ಯ ಸಾನಿಧ್ಯಕ್ಕೆ ತಮ್ಮ ಸಮುದಾಯದ ಸ್ವಾಮೀಜಿಗಳ ಹೆಸರನ್ನು ಆಯ್ಕೆ ಮಾಡಿ ಒಂದೆರಡು ದಿನಗಳಲ್ಲಿ ನೀಡಲಾಗುವುದು. ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಹೆಸರನ್ನು ನೀಡಲಾಗುವುದು ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿವಿಧ ಜಯಂತಿಗಳ ಆಚರಣೆಯ ಸಂಬಂಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net