ಅಹೋರಾತ್ರಿ ಪ್ರತಿಭಟನೆಗೆ ಸ್ಪಂದಿಸದ ಜಿಲ್ಲಾಡಳಿತ

6
Published on

ಮೈಸೂರು: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಗುರುವಾರ 4ನೇ ದಿನ ಪೂರೈಸಿದೆ. ಆದರೆ, ಇವರ ಸಮಸ್ಯೆಗೆ ಶಾಸಕರು, ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ಮಾತ್ರ ಸಿಕ್ಕಿಲ್ಲ. ನಾಲ್ಕು ದಿನವಾದರೂ ಜಿಲ್ಲಾಡಳಿತವಾಗಲೀ, ಚುನಾಯಿತ ಪ್ರತಿನಿಧಿಗಳಾಗಲೀ ಕ್ಯಾರೇ ಎನ್ನದಿರುವುದು ಪ್ರತಿಭಟನಾಕಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇಲವಾಲ ಹೋಬಳಿಗೆ ಸೇರಿದ ರೈತರ ಫಲವತ್ತಾದ ಭೂಮಿ ಮೇಲೆ ವಿದ್ಯುತ್ ಲೈನ್ ಎಳೆಯಬಾರದು ಎಂಬುದು ರೈತರ ಬೇಡಿಕೆಯಾಗಿದೆ. ಆದರೆ, ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ಅಧಿಕಾರಿಗಳು ಹಿರಿಯೂರಿನಿಂದ ಬರುತ್ತಿರುವ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಪವರ್‌ಗ್ರಿಡ್ ಲೈನ್‌ಅನ್ನು ಕೃಷಿ ಜಮೀನಿನ ಮೇಲೆ ಎಳೆಯುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ಯಾವುದೇ ಕಾರಣಕ್ಕೂ ವಿದ್ಯುತ್ ಲೈನ್ ಎಳೆಯಬಾರದು ಎಂದು ಆಗ್ರಹಿಸಿ ಸೋಮವಾರದಿಂದ ಡಿಸಿ ಕಚೇರಿ ಮುಂಭಾಗದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಅವರ ಸಮಸ್ಯೆಗೆ ಪರಿಹಾರ ದೊರೆತಿಲ್ಲ.
ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳ ತಂಡ ರೈತರೊಂದಿಗೆ ನಡೆಸಿದ ಸಭೆ ವಿಫಲವಾಗಿದ್ದು, ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.
ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಈ ಸಮಸ್ಯೆ ಆಲಿಸಲು ಜಿಲ್ಲಾ ಉಸ್ತುವಾರಿ ಸಚಿವರು ಬಾರದಿದ್ದರೆ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಆಯೋಜಿಸಿರುವ ಕೆಡಿಪಿ ಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದ ಯಾವುದೇ ಪ್ರತಿನಿಧಿಗಳು, ಅಧಿಕಾರಿಗಳು ಸಮಸ್ಯೆ ಆಲಿಸುವ ಕೆಲಸ ಮಾಡಿಲ್ಲ. ಇದು ನಿರ್ಲಕ್ಷೃ ಧೋರಣೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ವಿದ್ಯುತ್ ಪ್ರಸರಣದ ಮಾರ್ಗ ನಿರ್ಮಾಣಕ್ಕೆ ಯಾವುದೇ ಕಡಿವಾಣವಿಲ್ಲದಾಗಿದೆ. ಈ ಕುರಿತು ರಾಜ್ಯಾದ್ಯಂತ ಹೋರಾಟ ನಡೆಯುತ್ತಿದೆ. ಈ ನಡುವೆ, ಮೈಸೂರು ತಾಲೂಕಿನ ಇಲವಾಲ ಹೋಬಳಿಗೆ ಸೇರಿದ ಯಾಚೇಗೌಡನಹಳ್ಳಿ, ಹೊಸಕೋಟೆ, ದೊಡ್ಡೇಗೌಡನ ಕೊಪ್ಪಲು, ಕಲ್ಲೂರು, ನಾಗನಹಳ್ಳಿ, ಆನಂದೂರು, ಚಿಕ್ಕನಹಳ್ಳಿ, ಮೇಗಲಾಪುರ, ಉಂಡವಾಡಿ, ಮೈದನಹಳ್ಳಿ ಮೂಲಕ ಹಿರಿಯೂರಿನಿಂದ ಮೈಸೂರಿನವರೆಗೆ 440 ಕೆವಿ ವಿದ್ಯುತ್ ಪ್ರಸರಣದ ಗೋಪುರಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿಂದೆ ಗುಂಗ್ರಾಲ್ ಛತ್ರ, ಮೇಗಲಾಪುರ, ಮೈದನಹಳ್ಳಿಗಳ ಮೂಲಕ ವಿದ್ಯುತ್ ಮಾರ್ಗ ಹಾದು ಹೋಗಬೇಕಿತ್ತು. ಆದರೆ, ರಿಯಲ್ ಎಸ್ಟೇಟ್, ಡೆವಲಪರ್ಸ್‌ಗಳ ಒತ್ತಡಕ್ಕೆ ಮಣಿದು ಮಾರ್ಗ ಬದಲಿಸಿದ್ದು, ಫಲವತ್ತಾದ ತೋಟಗಳಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರ ಸಮ್ಮುಖದಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾರ್ಗ ಬದಲಿಸುವ ಸಂಬಂಧ ಪರಿಶೀಲನೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಪವರ್ ಗ್ರೀಡ್ ಅಳವಡಿಕೆಗೆ ಪೊಲೀಸರ ರಕ್ಷಣೆಯಲ್ಲಿ ಅಳತೆ ಕಾರ್ಯ ಮುಂದುವರಿದಿದೆ. ಈ ಮೂಲಕ ತೋಟಗಳಲ್ಲೇ ಗೋಪುರಗಳನ್ನು ನಿರ್ಮಿಸಲು ತಯಾರಿ ನಡೆದಿದೆ. ಈ ಕೆಲಸದಿಂದ ರೈತರು ತೋಟಗಳನ್ನು ಕಳೆದುಕೊಳ್ಳಲಿದ್ದು, ಈ ಮಾರ್ಗವನ್ನು ಬದಲಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಅಶ್ವತ್ಥ ನಾರಾಯಣರಾಜೇ ಅರಸ್, ಲೋಕೇಶ್‌ರಾಜೇ ಅರಸ್, ಸರಗೂರು ನಟರಾಜು, ಹೊಸೂರು ಕುಮಾರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net