ಮೈಸೂರು ಡಿಸಿ ಲಕ್ಷ್ಮೀಕಾಂತ ರೆಡ್ಡಿ ಅಧಿಕಾರ ಸ್ವೀಕಾರ

mysore
Published on

ಮೈಸೂರು: ಮೈಸೂರಿನ ಜಿಲ್ಲಾಧಿಕಾರಿಯಾಗಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರ ಸ್ವೀಕರಿಸಿದರು.


ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿರ್ಗಮಿತ ಡಿಸಿ ಡಾ ಕೆ.ವಿ.ರಾಜೇಂದ್ರ ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.


2015ರ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿರುವ ಲಕ್ಷ್ಮೀಕಾಂತ ರೆಡ್ಡಿ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ಇದಕ್ಕೂ ಮುನ್ನ ಮೈಸೂರು ಮಹಾನಗರಪಾಲಿಕೆ ಆಯುಕ್ತರಾಗಿಯೂ ಎರಡು ಮುಕ್ಕಾಲು ವರ್ಷ ಸೇವೆ ಸಲ್ಲಿಸಿದ್ದರು.


ನಿರ್ಗಮಿತ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಇವರು 2022ರ ಅಕ್ಟೋಬರ್‌ನಿಂದ ಇಲ್ಲಿಯವರೆಗೆ ಮೈಸೂರು ಡಿಸಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ದೊಡ್ಡ ಜವಾಬ್ದಾರಿ ಇದೆ:


ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀಕಾಂತ್ ರೆಡ್ಡಿ ‘ಈ ಹಿಂದೆ ಮೈಸೂರು ಪಾಲಿಕೆ ಆಯುಕ್ತರಾಗಿ ಕೆಲಸ ಮಾಡಿದ್ದೆ. ಇದೀಗ ಮತ್ತೊಮ್ಮೆ ಮೈಸೂರಿನಲ್ಲಿ ಕರ್ತವ್ಯ ನಿರ್ವಹಿಸಲು ಅವಕಾಶ ದೊರೆತಿರುವುದು ಅದೃಷ್ಟ ಎಂದು ಭಾವಿಸಿರುವೆ’ ಎಂದು ಸಂತಸ ವ್ಯಕ್ತಪಡಿಸಿದರು.


ಮೈಸೂರಿನಲ್ಲಿ ಕೆಲಸ ಮಾಡಿದ ಅನುಭವವು ಮೈಸೂರು ಜಿಲ್ಲಾಧಿಕಾರಿ ಬರಲು ಸಹಾಯ ಮಾಡಿದೆ. ಮುಖ್ಯಮಂತ್ರಿ ತವರು ಜಿಲ್ಲೆಯಾಗಿರುವುದರಿಂದ ದೊಡ್ಡ ಜವಾಬ್ದಾರಿ ಇದೆ. ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡುವ ವಿಶ್ವಾಸ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net