ಅಪಘಾತ ಪ್ರಮಾಣ ತಗ್ಗಿಸಲು ಮೈಸೂರು ಜಿಲ್ಲಾಧಿಕಾರಿ ಸೂಚನೆ

dr.K.V.Rajendra new dc
Published on

ಮೈಸೂರು: ಅಪಘಾತ ಪ್ರಮಾಣ ತಗ್ಗಿಸಲು ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ಅಧಿಕಾರಿ ಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಸ್ತೆಗಳು ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗಿರಬೇಕು. ರಸ್ತೆಗಳು ಉತ್ತಮವಾಗಿದ್ದರೆ ಅಪಘಾತ ಪ್ರಮಾಣವನ್ನು ತಗ್ಗಿಸಬಹುದು. ಹಾಗಾಗಿ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇಡಬೇಕು ಎಂದು ಸೂಚನೆ ನೀಡಿದರು.

ಮುಂದಿನ ಒಂದು ವಾರದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದ್ದು, ಮಳೆ ಸಂದರ್ಭದಲ್ಲಿ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿರ ಬೇಕು. ಸಿಗ್ನಲ್‌ಲೈಟ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಪ್ರಯಾಣಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.


ಪ್ರತಿಯೊಂದು ಜೀವವೂ ಅಮೂಲ್ಯವಾದದ್ದು, ಅಪಘಾತಗಳು ಕಡಿಮೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಇರುವೆಡೆ ಸ್ಪೀಡ್‌ಬ್ರೇಕರ್‌ಗಳನ್ನು ಅಳವಡಿಸಬೇಕು. ನಗರದ ಪೀಪಲ್ಸ್ ಪಾರ್ಕ್ ಸೇರಿದಂತೆ ಅಗತ್ಯ ಇರುವೆಡೆ ಹೈ-ಮಾಸ್ಟ್ ದೀಪಗಳನ್ನು ಅಳವಡಿಸಬೇಕು. ರಸ್ತೆಗಳಲ್ಲಿ ಉಬ್ಬುಗಳನ್ನು ಸರಿಯಾಗಿ ನಿರ್ವಹಿಸಿ ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಕಡೆಗಳಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಅಪಘಾತಗಳಿಂದ 47 ಜನರು ಮೃತಪಟ್ಟಿದ್ದಾರೆ. ಏಪ್ರಿಲ್‌ನಲ್ಲಿ 50 ಜನರು ಸಾವನ್ನಪ್ಪಿ ದ್ದಾರೆ. ಆದ್ದರಿಂದ ಪ್ರಯಾಣಿಕರು ಸುರಕ್ಷತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು. ದ್ವಿ ಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸಿಸಬೇಕು. ನಾಲ್ಕು ಚಕ್ರದ ವಾಹನ ಚಾಲಕರು ಸೀಟ್‌ಬೆಲ್ಟ್ ಧರಿಸಿ ವಾಹನ ಚಲಾಯಿಸಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಉಪ ಪೊಲೀಸ್ ಆಯುಕ್ತೆ ಜಾಹ್ನವಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರಾಜು ಹಾಗೂ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net