

ಮೈಸೂರು: ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದ ದಸರಾ ದೀಪಾಲಂಕಾರಕ್ಕೆ ಒಟ್ಟು 5.5 ಕೋಟಿ ರೂ. ವೆಚ್ಚವಾಗಿದೆ. ಒಟ್ಟು 4.5 ಕೋಟಿ ರೂ. ಅಂದಾಜು ವೆಚ್ಚವಾಗುವ ನಿರೀಕ್ಷೆಯನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಹೊಂದಿತ್ತು. ಆದರೆ, ದೀಪಾಲಂಕಾರದ ಸಮಯ ಹಾಗೂ ಅವಧಿ ವಿಸ್ತರಣೆಯಿಂದ ಹೆಚ್ಚುವರಿಯಾಗಿ 1 ಕೋಟಿ ರೂ.ವೆಚ್ಚವಾಗಿದೆ. ವಿದ್ಯುತ್ ದೀಪಾಲಂಕಾರಕ್ಕೆ ಒಟ್ಟು 2.3 ಲಕ್ಷ ಕಿ.ಲೋ. ವ್ಯಾಟ್ ವಿದ್ಯುತ್ ಬಳಕೆಯಾಗಿದೆ.
ಈ ಬಾರಿ ದಸರಾ ದೀಪಾಲಂಕಾರವನ್ನು ಸೆ.24 ರಿಂದ ಅ.10ರವರೆಗೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ದಸರಾ ಮುಗಿ ದರೂ ದೀಪಾಲಂಕಾರ ವೀಕ್ಷಿಸಲು ಜನರು ಮುಗಿ ಬೀಳುತ್ತಿದ್ದ ಹಿನ್ನೆಲೆಯಲ್ಲಿ ದೀಪಾಲಂಕಾರವನ್ನು ಮತ್ತೆ ಎರಡು ದಿನ ವಿಸ್ತರಣೆ ಮಾಡಲಾಯಿತು. ನಾಡಹಬ್ಬ ದಸರಾ ಉತ್ಸವಕ್ಕೆ ಸೆ.26 ರಂದು ಚಾಲನೆ ದೊರೆಯತು. ಆದರೆ, ಅದಕ್ಕೂ ಎರಡು ದಿನ ಮುಂಚಿತವಾ ಗಿಯೇ ನಗರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲು ಪ್ರಾರಂಭಿಸಿತು.
ಕಳೆದ ಬಾರಿ ದಸರಾ ದೀಪಾಲಂಕಾರಕ್ಕೆ ಒಟ್ಟು 4.8 ಕೋಟಿ ರೂ. ವೆಚ್ಚವಾಗಿತ್ತು. ಈ ಬಾರಿ ಅದ್ದೂರಿ ದಸರಾ ಉತ್ಸವ ನಡೆಸಲು ಸರ್ಕಾರ ನಿರ್ಧರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಒಟ್ಟು 128 ಕಿ.ಮೀ.ವರೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೆ 98 ವೃತ್ತಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿತು.
ಈ ಬಾರಿಯ ದಸರಾ ದೀಪಾಲಂಕಾರ ಪ್ರತಿಯೊಬ್ಬರನ್ನು ಆಕರ್ಷಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಬಾರಿ ದೀಪಾಲಂಕಾರವನ್ನು ಕಣ್ತುಂಬಿಕೊಂಡಿದ್ದಾರೆ. ಈ ಬಾರಿ ದಸರಾ ಉತ್ಸವದ ವಿವಿಧ ಕಾರ್ಯಕ್ರಮಗಳನ್ನು ಪ್ರಾಯೋಜಕತ್ವದಲ್ಲಿ ನಡೆಸಲಾಗಿದೆ. ಅದೇ ರೀತಿ ದೀಪಾಲಂಕಾರಕ್ಕೂ ಪ್ರಯೋಜಕತ್ವ ಪಡೆಯಲಾಗಿತ್ತು. ಪ್ರಾಯೋಜಕತ್ವದ ಮೂಲಕ ಒಟ್ಟು 45 ಲಕ್ಷ ರೂ. ಸಂಗ್ರಹವಾಗಿದ್ದು, ವಿವಿಧ ಕಂಪನಿಗಳಿಂದ ಉತ್ತಮ ಸ್ಪಂದನೆ ದೊರೆಯಿತು ಎನ್ನುತ್ತಾರೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯ ವಿಭವಸ್ವಾಮಿ.
ಪ್ರತಿ ಬಾರಿ ರಾತ್ರಿ 9 ಅಥವಾ 10 ಗಂಟೆವರೆಗೆ ವಿದ್ಯುತ್ ದೀಪಾಲಂಕಾರ ಇರುತಿತ್ತು. ಈ ಬಾರಿ ಈ ಅವಧಿಯನ್ನು ರಾತ್ರಿ 11.30ರವರೆಗೆ ವಿಸ್ತರಿಸಲಾಯಿತು. ಹೀಗಾಗಿ ಯಾವುದೇ ಒತ್ತಡ ಇಲ್ಲದೆ ಜನರು ನಿಶ್ಚಿಂತೆಯಿಂದ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು.