

ಮೈಸೂರು: ನಾಡಹಬ್ಬ ದಸರಾ ಪ್ರಯುಕ್ತ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಶುಕ್ರವಾರ ಹಮ್ಮಿಕೊಂಡಿದ್ದ ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿ ಗಮನ ಸೆಳೆಯಿತು.
ಜಾವಾ ಮೋಟಾರ್ ಬೈಕ್ ಸವಾರಿಯ ಪುರಭವನದಿಂದ ಹೊರಟು ದೊಡ್ಡ ಗಡಿಯಾರ ಚಾಮರಾಜ ಒಡೆಯರ್ ವೃತ್ತ, ಕೆ.ಆರ್. ವೃತ್ತ, ಬನುಮಯ್ಯ ಕಾಲೇಜು, ಕಾಡಾ ಕಚೇರಿ, ಜಯಚಾಮರಾಜ ಒಡೆಯರ್ ವೃತ್ತ, ಎಸ್‌ಐಆರ್‌ಡಿ, ಲಲಿತಮಹಲ್, ಟೆರಿಷಿಯನ್ ಕಾಲೇಜು, ಪಿಟಿ ಸರ್ಕಲ್, ವಸಂತ ಮಹಲ್ ಮೂಲಕ ಸಾಗಿ ಪುರಾತತ್ವ ಇಲಾಖೆಯಲ್ಲಿ ಅಂತ್ಯಗೊಂಡಿತು.
ಬೈಕ್ ಸವಾರಿಗೆ ಚಾಲನೆ ನೀಡಿದ ಪುರತತ್ವ ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ದೇವರಾಜು ಮಾತನಾಡಿ, ಮೈಸೂರು ದಸರಾ ವಿಶ್ವಕ್ಕೆ ಒಂದು ಪರಂಪರೆಯನ್ನು ತೋರಿಸುತ್ತದೆ. ಮೈಸೂರಿನಲ್ಲಿ ಪಾರಂಪರಿಕವಾಗಿ, ಸಾಂಸ್ಕೃತಿಕವಾಗಿ ಸಾಕಷ್ಟು ವಿಚಾರಗಳಿವೆ. ಇಂದಿನ ಮಕ್ಕಳಿಗೆ ಪಾರಂಪರಿಕ ವಿಚಾರಗಳು ಪರಿಚಯ ಮಾಡಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಿದೆ. ಅದನ್ನು ಯಾವ ರೀತಿ ಪರಿಚಯ ಮಾಡಬೇಕು ಎಷ್ಟು ವಿಶೇಷವಾಗಿ ವಿಭಿನ್ನವಾಗಿ ಪರಿಚಯ ಮಾಡಬೇಕು ಎನ್ನುವುದು ನಮ್ಮ ಕಾರ್ಯವೈಖರಿಗೆ ಬಿಟ್ಟಿರುವ ವಿಚಾರ ಎಂದರು.
ಬ್ರಾಂಡ್ ಮೈಸೂರು ಹೆಸರಿನಲ್ಲಿ ವಸ್ತು ಪ್ರದರ್ಶನ ಪ್ರಾರಂಭಿಸಲಾಗಿದೆ. ಇಲ್ಲಿ ಮೈಸೂರು ಸ್ಯಾಂಡಲ್ ಸೋಪ್, ಮೈಸೂರ್ ಸಿಲ್ಕ್, ಚನ್ನಪಟ್ಟಣ ಗೊಂಬೆಗಳು ಇಡಲಾಗಿದೆ. ನಮ್ಮ ಇಲಾಖೆಯ ಪರವಾಗಿ ಸುಮಾರು 13 ಮಳಿಗೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಮೈಸೂರು ದಸರಾ 10 ದಿನಗಳ ಕಾಲ ನಡೆಯುವ ಹಬ್ಬವಾಗಿದೆ. ಮೈಸೂರಿಗರು ಮತ್ತು ಹೊರಗಿನವರು ಕಣ್ತುಂಬಿಕೊಳ್ಳಬಹುದು. ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನಮ್ಮೆಲ್ಲರಿಗೂ ಹೆಮ್ಮೆ, ಅದರಲ್ಲೂ ನಮ್ಮ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಾಕಷ್ಟು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದರು.
ಇಲಾಖೆಯಿಂದ ಜಿಲ್ಲಾ, ತಾಲೂಕು ಮಟ್ಟದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳ ಹಾಗೂ ಪರಂಪರೆಯ ಪರಿಚಯ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕಾಲೇಜು ವಿದ್ಯಾರ್ಥಿಗಳಿಗೆ ‘ಹೆರಿಟೇಜ್ ಕ್ಲಬ್’ ಕಾರ್ಯಕ್ರಮದ ಮೂಲಕ ಪರಂಪರೆಗಳ ಬಗ್ಗೆ ಅಭಿಯಾನ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಪಾದೇಶಿಕ ಆಯುಕ್ತ ರಮೇಶ್ ಮಾತನಾಡಿ, ಪರಂಪರೆ ಎಂದರೆ ನಾವು ಬೆಳೆದು ಬಂದ ದಾರಿ. ಆ ದಾರಿ ಯಾವ ಕಾರಣಕ್ಕೆ ಯಾವ ಕಾಲದಲ್ಲಿ ಸೃಷ್ಟಿ ಆಗಿತ್ತು? ಯಾವ ಕಾರಣಕ್ಕೆ ಸೃಷ್ಟಿಯಾಯಿತು? ಅದರ ಉದ್ದೇಶ ಏನು ಎಂಬ ಚರಿತ್ರೆಯನ್ನು ತಿಳಿದುಕೊಳ್ಳುವ ಪ್ರಯತ್ನಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ನಿರ್ದೇಶಕ ಅಮಿತ್ ಪಾಂಡೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಇತಿಹಾಸ ಅಧ್ಯಯನದ ಸಂಶೋಧನಾ ವಿಭಾಗದ ಮುಖ್ಯಸ್ಥ ಸೆಲ್ವಪಿಳ್ಳೆ ಅಯ್ಯಂಗಾರ್, ಪಾರಂಪರಿಕ ತಜ್ಞ ಎನ್.ಎಸ್. ರಂಗರಾಜು ಹಾಗೂ ಇತರರು ಇದ್ದರು