

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯ ಅತ್ಯುತ್ತಮ ಕಲಾತಂಡ ಬಹುಮಾನವನ್ನು ಘೋಷಿಸಲಾಗಿದ್ದು, ಉಡುಪಿ ಜಿಲ್ಲೆಯ ಹೆಗ್ಗುಂಜೆಯ ಶ್ರೀ ಮಲ್ಲಿಕಾರ್ಜುನ ಕುಡುಬಿ ಹೋಳಿ ಜಾನಪದ ಕಲಾಸಂಘ ತಂಡದ ಗುಮಟೆ ನೃತ್ಯ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಮೈಸೂರಿನ ಆದಿದ್ರಾವಿಡ ತಮಟೆ ಮತ್ತು ನಗಾರಿ ಸಾಂಸ್ಕೃತಿಕ ಕಲಾವೃಂದ ತಂಡದ ತಮಟೆ ಮತ್ತು ನಗಾರಿ, ಮೈಸೂರಿನ ಶ್ರೀ ಬಸವೇಶ್ವರ ವೀರಗಾಸೆ ಜಾನಪದ ಕಲಾತಂಡದ ವೀರಭದ್ರನ ಕುಣಿತ ತಂಡ ಜಂಟಿಯಾಗಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಚಿಕ್ಕಬಳ್ಳಾಪುರ ಜಂಗಮಕೋಟೆಯ ಶ್ರೀ ನಂಜುಂಡೇಶ್ವರ ಗಾರುಡಿ ಗೊಂಬೆ ನೃತ್ಯ ಯುವಕರ ಸಂಘದ ಗಾರುಡಿ ಗೊಂಬೆ ತೃತೀಯ ಸ್ಥಾನ ಪಡೆದುಕೊಂಡಿದೆ.
ಪ್ರಥಮ 15,000 ರೂ., ದ್ವಿತೀಯ 10,000 ರೂ., ತೃತೀಯ 5,000 ರೂ. ಬಹುಮಾನ ನೀಡಲಾಗುವುದು ಎಂದು ದಸರಾ ಮೆರವಣಿಗೆ ಮತ್ತು ಪಂಜಿನ ಕವಾಯತು ಉಪಸಮಿತಿ ಉಪ ವಿಶೇಷಾಧಿಕಾರಿಯಾಗಿರುವ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.