

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಇಂದಿನಿಂದ ದಸರಾ ಯುವ ಸಂಭ್ರಮ ಪ್ರಾರಂಭವಾಗಿದೆ. ಸಂಜೆ 5 ಗಂಟೆಗೆ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಉದ್ಘಾಟನೆ ನಡೆಯಲಿದೆ. ಅಕ್ಟೋಬರ್ 6 ರಿಂದ 16ರವರಗೆ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ನಟರಾದ ವಸಿಷ್ಠ ಸಿಂಹ, ಹರಿಪ್ರಿಯಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇಂದಿನಿಂದ ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.
ದಸರಾ ಮಹೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭೆ ಅನಾವಣರಣಕ್ಕೆ ಯುವ ಸಂಭ್ರಮ ಆಯೋಜಿಸುವ ಮೂಲಕ ವೇದಿಕೆ ಕಲ್ಪಿಸಲಾಗುತ್ತಿದೆ. ಅದರಂತೆ ಈ ಬಾರಿಯೂ ದಸರಾ ಮೊದಲ ಕಾರ್ಯಕ್ರಮವಾದ ಯುವ ಸಂಭ್ರಮವನ್ನು ಆಯೋಜಿಸಲಾಗುತ್ತಿದೆ.
ಯುವ ಸಂಭ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳು ಮತ್ತು ರಾಜ್ಯದ ಇತರೆ ವಿವಿಗಳ ಕಾಲೇಜುಗಳು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿದ್ದು, ಮೈಸೂರು ಭಾಗದಲ್ಲೇ 250 ಕಾಲೇಜುಗಳು ಭಾಗವಹಿಸಲಿವೆ. ಪ್ರತಿದಿನ 20 ತಂಡಗಳು ಪ್ರದರ್ಶನ ನೀಡಲಿದ್ದು, ಪ್ರತಿ ತಂಡಕ್ಕೆ 7-10 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ತಂಡದಲ್ಲಿ 30ರಿಂದ 40 ಕಲಾವಿದರಿಗೆ ಅವಕಾಶ ನೀಡಲಾಗಿದೆ. 8 ದಿನಗಳ ಕಾರ್ಯಕ್ರಮದಲ್ಲಿ ಒಟ್ಟು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಯುವ ಸಂಭ್ರಮದಲ್ಲಿ ನಿತ್ಯ 20 ತಂಡಗಳು ಪ್ರದರ್ಶನ ನೀಡಲಿದ್ದು, ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಆಯ್ಕೆ ಮಾಡಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುವ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕಲಾವಿದರನ್ನು ಗೌರವಿಸುವುದರ ಜತೆಗೆ ಪ್ರಯಾಣ ಭತ್ಯೆ, ವಸ್ತ್ರ ವಿನ್ಯಾಸದ ಖರ್ಚುವೆಚ್ಚ ನೀಡಲಾಗುತ್ತದೆ. ದೂರದಿಂದ ಬಂದವರಿಗೆ ಮಾತ್ರ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ.