ಮೈಸೂರಿಗೆ ಬಂದಿಳಿದ ಗಜಪಡೆ; ಇಂದು ಅರಮನೆ ಪ್ರವೇಶ

Gajapade
Published on

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಗುರುವಾರ ಆಗಮಿಸಿದ್ದು, ಇದರೊಂದಿಗೆ ದಸರಾ ಚಟುವಟಿಕೆಗಳು ನಿಧಾನವಾಗಿ ಗರಿಗೆದರಿವೆ. ನಾಡಹಬ್ಬ ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ ಪಯಣಕ್ಕೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪ್ರವೇಶ ದ್ವಾರದ ಬಳಿಯ ವಿಧ್ಯುಕ್ತ ಚಾಲನೆ ನೀಡಲಾಯಿತು. ಸಂಪ್ರದಾಯದಂತೆ ತುಲಾ ಲಗ್ನದಲ್ಲಿ ಬೆಳಗ್ಗೆ 10.10ರಿಂದ 11 ಗಂಟೆ ಸಮಯದಲ್ಲಿ ದಸರಾ ಆನೆಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು. ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಗಜಪಯಣ ಕೂಡ ಸಾಂಕೇತಿಕವಾಗಿ ನೆರವೇರಿತು. ಬಳಿಕ ಚಿನ್ನದ ಅಂಬಾರಿ ಹೊರಲಿರುವ ಹೊಸ ಸಾರಥಿ ಅಭಿಮನ್ಯು (54) ಸೇರಿ ವಿಜಯ (61), ಕಾವೇರಿ (42), ಗೋಪಿ (38) ಹಾಗೂ ವಿಕ್ರಮ (47) ಆನೆಗಳು ಮಾತ್ರ ಮೈಸೂರಿಗೆ ಪಯಣ ಬೆಳೆಸಿದವು. ಲಾರಿಯಲ್ಲಿ ಬಂದ ಆನೆಗಳು ಮೈಸೂರಿನ ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ.

ಶುಕ್ರವಾರ ಮೈಸೂರು ಅರಮನೆ ಅಂಗಳವನ್ನು ದಸರಾ ಆನೆಗಳು ಪ್ರವೇಶಿಸಲಿದ್ದು, ಮಧ್ಯಾಹ್ನ 12.18ರಿಂದ 12.40ರ ಧನುರ್ ಲಗ್ನದಲ್ಲಿ ಸ್ವಾಗತ ಕಾರ್ಯಕ್ರಮ ನೆರವೇರಲಿದೆ. ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳಿಗೆ ಸ್ವಾಗತ ಕೋರಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net