

ಮೈಸೂರು: ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಮಂಗಳವಾರದಿಂದ ದಸರಾ ಜಂಬೂಸವಾರಿ ಮೆರವಣಿಗೆಗೆ ತಾಲೀಮು ಪ್ರಾರಂಭಿಸಿತು. ನಗರದ ಅರಮನೆ ಆವರಣದಿಂದ ಹಳೇ ಆರ್‌ಎಂಸಿ ವೃತ್ತದವರೆಗೆ ಆನೆಗಳು ಯಶಸ್ವಿಯಾಗಿ ತಾಲೀಮು ನಡೆಸಿತು.
ಅಭಿಮನ್ಯು ನೇತೃತ್ವದಲ್ಲಿ ದಸರಾ ಆನೆಗಳಾದ ಪ್ರಶಾಂತ, ಧನಂಜಯ, ಕಂಜನ್, ಕಾವೇರಿ, ಭೀಮ, ಮಹೇಂದ್ರ, ಏಕಲವ್ಯ, ಲಕ್ಷ್ಮೀ ತಾಲೀಮು ನಡೆಸಿತು. ಈ ಆನೆಗಳು ಈ ಹಿಂದೆ ದಸರಾ ಉತ್ಸವದಲ್ಲಿ ಪಾಲ್ಗೊಂಡ ಅನುಭವ ಇರುವ ಹಿನ್ನೆಲೆಯಲ್ಲಿ ಯಾವುದೇ ಆನೆಗಳು ವಾಹನ, ಜನಜಂಗುಳಿಯ ಶಬ್ದಕ್ಕೆ ಹೆದರದೆ ಯಶಸ್ವಿಯಾಗಿ ಹೆಜ್ಜೆ ಹಾಕಿತು. ಸಾಕಷ್ಟು ಜನರು ಆನೆಗಳ ಮೆರವಣಿಗೆಯನ್ನು ನೋಡಿ ಕಣ್ತುಂಬಿಕೊಂಡರು.
ದಸರಾ ಗಜಪಡೆ .4ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿ ನಗರದ ಅಶೋಕಪುರಂನ ಅರಣ್ಯ ಭವನದಲ್ಲಿ ಬೀಡುಬಿಟ್ಟಿತ್ತು. ಆ.10 ರಂದು ಅನೆಗಳು ಅರಮನೆ ಆವರಣವನ್ನು ಪ್ರವೇಶಿಸಿತ್ತು. ಸೋಮವಾರ ಆನೆಗಳ ತೂಕವನ್ನು ಪರಿಶೀಲಿಸುವ ಕಾರ್ಯ ನಡೆಯಿತು. ನಂತರ ಆನೆಗಳಿಗೆ ಪೌಷ್ಟಿಕ ಆಹಾರ ನೀಡಲು ಪ್ರಾರಂಭಿಸಲಾಗಿದೆ.
ಸಾಂಪ್ರದಾಯಿಕ ಪೂಜೆ: ಆನೆಗಳ ತಾಲೀಮು ಯಶಸ್ವಿಯಾಗಿ ನಡೆಯಲಿ ಎಂದು ಅರಮನೆ ಆವರಣದಲ್ಲಿ ಬೆಳಗ್ಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ನಂತರ ತಾಲೀಮು ಪ್ರಾರಂಭಿಸಲಾಯಿತು. ಅರಮನೆ ಆವರಣದಿಂದ ಹೊರಟ ಆನೆಗಳು ಬಲರಾಮ ದ್ವಾರದ ಮೂಲಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣವನ್ನು ಪ್ರವೇಶಿಸಿತು. ನಂತರ ಚಾಮರಾಜ ವೃತ್ತ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್‌ಎಂಸಿ ವೃತ್ತದವರೆಗೆ ಸಾಗಿ ಅದೇ ಮಾರ್ಗದಲ್ಲಿ ಅರಮನೆಗೆ ಹಿಂತಿರುಗಿದವು. ತಾಲೀಮು ಮುಗಿಸಿ ಬಂದ ಆನೆಗಳಿಗೆ ಮಜ್ಜನ ಮಾಡಿಸಿ ವಿಶೇಷ ಆಹಾರ ನೀಡಲಾಯಿತು.
ಆನೆಗಳ ತಾಲೀಮು ಸಂದರ್ಭ ಜನರಿಂದ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದು ಎಂಬ ಉದ್ದೇಶದಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆನೆಗಳು ಸಾಗುವ ಮಾರ್ಗದಲ್ಲಿ ಮೊಳೆ, ಕಬ್ಬಿಣದ ಚೂರುಗಳು ಇದ್ದರೆ ಆನೆಗಳ ಕಾಲಿಗೆ ಚುಚ್ಚಿಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಯಸ್ಕಾಂತದ ಸರಪಳಿಯನ್ನು ಜೀಪ್ ಹಿಂದೆ ಕಟ್ಟಿ ಆನೆಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಈ ಸಂದರ್ಭ ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ದಸರಾ ಗಜಪಡೆಯ ಎಲ್ಲ ಆನೆಗಳ ಆರೋಗ್ಯ ಉತ್ತಮವಾಗಿದೆ. ಇಂದು ಆರ್‌ಎಂಸಿ ವೃತ್ತದವರೆಗೆ ತಾಲೀಮು ನಡೆಸಿದ್ದೇವೆ. ಎಲ್ಲ ಆನೆಗಳಿಗೂ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ಅವುಗಳು ಬಹುಬೇಗನೆ ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ ಎಂದರು.