ಮೈಸೂರು ದಸರಾ: ಡ್ರೋನ್ ಶೋ ಚಿತ್ರೀಕರಣಕ್ಕೆ ನಿಷೇಧ

A drone show was held in Mysore.
Published on

ಮೈಸೂರು: ದಸರಾ ಪ್ರಯುಕ್ತ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್) ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಡ್ರೋನ್ ಶೋವನ್ನು ಖಾಸಗಿ ವ್ಯಕ್ತಿಗಳು ಡ್ರೋನ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸೆಸ್ಕ್ ನೀಡಿದೆ.

ಬನ್ನಿಮಂಟಪದಲ್ಲಿ ಅ.6 ಮತ್ತು 7 ರಂದು ಸಾರ್ವಜನಿಕರಿಗೆ ಉಚಿತವಾಗಿ ಡ್ರೋನ್ ಶೋ ಏರ್ಪಡಿಸಲಾಗಿತ್ತು. ಅ.11 ಮತ್ತು 12 ರಂದು ಡ್ರೋನ್ ಶೋ ಏರ್ಪಡಿಸಲಾಗಿದ್ದು, ಪಾಸ್ ಹೊಂದಿದವರು ಮಾತ್ರ ಈ ಶೋ ವೀಕ್ಷಿಸಲು ಅವಕಾಶವಿದೆ.

ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಡ್ರೋನ್ ಶೋ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಕೆಲವರು ಡ್ರೋನ್ ಶೋ ಅನ್ನು ಡ್ರೋನ್ ಮೂಲಕ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿರುವುದು ಕಂಡು ಬಂದಿದೆ. ಇಂತಹವರ ವಿರುದ್ಧ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಚ್ಚರಿಸಲಾಗಿದೆ.

ಕೇವಲ ಡ್ರೋನ್ ಪ್ರದರ್ಶನ ಮಾತ್ರವಲ್ಲದೆ ದಸರಾ ಅಂಗವಾಗಿ ಮೈಸೂರು ನಗರದಾದ್ಯಂತ ಸೆಸ್ಕ್ ವತಿಯಿಂದ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರದ ದೃಶ್ಯಗಳನ್ನು ಸಹ ಡ್ರೋನ್ ಮೂಲಕ ಅನಧಿಕೃತವಾಗಿ ಚಿತ್ರೀಕರಿಸುವುದು ಕೂಡ ಅಪರಾಧವಾಗಿದೆ. ಹಾಗಾಗಿ, ಯಾವುದೇ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಸೆಸ್ಕ್ ವತಿಯಿಂದ ನಡೆಸಲಾಗುತ್ತಿರುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಡ್ರೋನ್‌ಗಳ ಮೂಲಕ ಅನಧಿಕೃತ ಚಿತ್ರೀಕರಣ ಮಾಡಬಾರದು ಎಂದು ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net