ಶಿಬಿರದತ್ತ ಪಯಣ ಬೆಳೆಸಿದ ದಸರಾ ಗಜಪಡೆ

dasara elephant
Published on

ಮೈಸೂರು: ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಜಂಬೂಸವಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಶುಕ್ರವಾರ ಅರಮನೆ ಆವರಣದಿಂದ ಶಿಬಿರಗಳತ್ತ ತೆರಳಿತು. ಮೈಸೂರು ಬಿಡಲೊಪ್ಪದ ದುಬಾರೆ ಆನೆ ಶಿಬಿರದ ಶ್ರೀರಾಮ 1.20 ನಿಮಿಷ ಸತಾಯಿಸಿ ನಂತರ ಲಾರಿ ಏರಿದ. ಶ್ರೀರಾಮನನ್ನು ಲಾರಿ ಹತ್ತಿಸಲು ಅಂಬಾರಿ ಆನೆ ಅಭಿಮನ್ಯು ಸೇರಿದಂತೆ ಮೂರು ಆನೆಗಳು ಬರಬೇಕಾಯಿತು.

ಗಜಪಡೆಯ ಮೊದಲ ತಂಡದಲ್ಲಿ ಅಂಬಾರಿ ಆನೆ ಅಭಿಮನ್ಯು ಸೇರಿದಂತೆ 9 ಆನೆಗಳು ಆ.7 ರಂದು ಆಗಮಿಸಿತ್ತು. ಎರಡನೇ ತಂಡದಲ್ಲಿ ಒಟ್ಟು 5 ಆನೆಗಳು ಸೆ.7 ರಂದು ನಗರಕ್ಕೆ ಆಗಮಿಸಿತ್ತು. ಮೊದಲ ತಂಡದಲ್ಲಿ ಆಗಮಿಸಿದ ಲಕ್ಷ್ಮಿ ಆನೆಯು ಶ್ರೀ ದತ್ತಾತ್ರೇಯ ಮರಿಗೆ ಅರಮನೆ ಆವರಣದಲ್ಲಿ ಜನ್ಮ ನೀಡಿತು. ಹೀಗಾಗಿ ಅರಮನೆ ಆವರಣದಿಂದ ಶುಕ್ರವಾರ ಮರಿಯಾನೆ ಸೇರಿದಂತೆ ಒಟ್ಟು 15 ಆನೆಗಳು ಶಿಬಿರದತ್ತ ಮುಖ ಮಾಡಿತು.

ಅರಮನೆ ಆವರಣದಲ್ಲಿ ಬೆಳಗ್ಗೆ 10ಕ್ಕೆ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಆನೆಗಳ ಪಾದಗಳನ್ನು ತೊಳೆದು ಹರಿಶಿನ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಲಾಯಿತು. ಬಳಿಕ ಆನೆಗಳಿಗೆ ಕಬ್ಬು, ಬೆಲ್ಲ ಹಾಗೂ ಹಣ್ಣು ಹಂಪಲುಗಳನ್ನು ನೀಡಲಾಯಿತು. ಅರ್ಚಕ ಪ್ರಹ್ಲಾದ್ ಪೂಜೆ ನೆರವೇರಿಸಿದರು. ಬೆಳಗ್ಗೆ 10.30 ರಿಂದ ಆನೆಗಳನ್ನು ಲಾರಿಗೆ ಹತ್ತಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಮಧ್ಯಾಹ್ನ 12.20ಕ್ಕೆ ಎಲ್ಲ ಆನೆಗಳು ಲಾರಿಯನ್ನು ಏರಿದವು. ಮಧ್ಯಾಹ್ನ 1.15ಕ್ಕೆ ಆನೆಗಳು ಶಿಬಿರದತ್ತ ಪ್ರಯಣ ಬೆಳೆಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net