

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆಯ ಆಗಮನದೊಂದಿಗೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಮನೆ ಮಾಡುತ್ತಿದೆ. ಈಗಾಗಲೇ 2024ರ ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆ ಪ್ರವೇಶಿಸಿದ್ದು, ಶನಿವಾರ (ಆಗಸ್ಟ್ 24) ತೂಕ ಪರೀಕ್ಷೆ ಮಾಡಲಾಗಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ನಿತ್ಯವೂ ತಾಲೀಮು ನಡೆಸುತ್ತಿವೆ. ಇಂದು ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಒಟ್ಟು 9 ಆನೆಗಳು ಪೊಲೀಸರ ಬಿಗಿ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರಕ್ಕೆ ಆಗಮಿಸಿ ತೂಕ ಪರೀಕ್ಷೆಯಲ್ಲಿ ಭಾಗಿಯಾದವು. ಎರಡನೇ ಹಂತದ ಆನೆಗಳ ಜೊತೆ ಮೊದಲನೇ ಹಂತದ ಆನೆಗಳಿಗೂ ತೂಕ ಪರೀಕ್ಷೆ ಮಾಡಲಾಗಿದೆ.
5,560 ಕೆಜಿಯೊಂದಿಗೆ ಈ ಬಾರಿ ಕ್ಯಾಪ್ಟನ್ ಅಭಿಮನ್ಯು ತೂಕದ ವಿಚಾರದಲ್ಲಿ ಮುಂದಿದ್ದಾನೆ. ಉಳಿದಂತೆ ಧನಂಜಯ 5,155 ಕೆಜಿ, ಗೋಪಿ 4,970 ಕೆಜಿ, ಭೀಮ 4,945 ಕೆಜಿ, ಹೊಸ ಆನೆ ಏಕಲವ್ಯ 4,730 ಕೆಜಿ, ಕಂಜನ್ 4,515 ಕೆಜಿ, ಹೆಣ್ಣಾನೆಗಳಾದ ವರಲಕ್ಷ್ಮೀ 3,495 ಕೆಜಿ, ಲಕ್ಷ್ಮೀ 2,480 ಕೆಜಿ ತೂಕ ಇವೆ.