

ಮೈಸೂರು: ನಾಡಹಬ್ಬ ದಸರಾ ಉತ್ಸವದ ಗಜಪಡೆಯ ಮಾವುತರು, ಕಾವಾಡಿಗರು ಹಾಗೂ ಕುಟುಂಬ ವರ್ಗದವರಿಗೆ ಅರಮನೆ ಮಂಡಳಿ ವತಿಯಿಂದ ಭಾನುವಾರ ಅರಮನೆ ಆವರಣದಲ್ಲಿ ಉಪಹಾರ ನೀಡಲಾಯಿತು.
ಮಾವುತರು, ಕಾವಾಡಿಗರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉಪಹಾರ ಉಣಬಡಿಸಿದರು. ಈ ಸಂದರ್ಭ ಮಾವುತರು ಹಾಗೂ ಕಾವಾಡಿಗರ ಯೋಗ ಕ್ಷೇಮವನ್ನು ಸಚಿವರು ವಿಚಾರಿಸಿದರು. ಬಳಿಕ ಮಾವುತ ಮತ್ತು ಕಾವಾಡಿಗರ ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ವಿತರಣೆ ಮಾಡಿದರು. ಇದೇ ವೇಳೆ ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರ ವೀಕ್ಷಿಸಿ ಬಿಪಿ ತಪಾಸಣೆ ಮಾಡಿಸಿಕೊಂಡರು.
ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮೀ ಹಾಗೂ ಮರಿ ಆನೆ ದತ್ತಾತ್ರೇಯನನ್ನು ಸಚಿವ ಸೋಮಶೇಖರ್ ವೀಕ್ಷಿಸಿ, ಆನೆಯ ಆರೋಗ್ಯದ ಕುರಿತು ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.