

ಮೈಸೂರು: ಜಗಳ ಬಿಡಿಸಲು ಹೋದ ವ್ಯಕ್ತಿಯನ್ನು ಹತ್ಯೆ ಮಾಡಿದ ಅಪರಾಧಿಗೆ ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಬಂಬೂಬಜಾರ್ ನಿವಾಸಿ ಅಯ್ಯನ್ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ತನ್ನ ತಂದೆ ಮುರುಗೇಶನೊಂದಿಗೆ ಸೇರಿಕೊಂಡು ತನ್ನ ಭಾವ ಎಸ್. ಶ್ರೀವತ್ಸ ಅವರನ್ನು ಹತ್ಯೆ ಮಾಡಲು 29-6-2023 ರಂದು ಯತ್ನಿಸುತ್ತಿದ್ದ. ಶ್ರೀವತ್ಸ ಅವರನ್ನು ಸಾಯಿಸುವ ಉದ್ದೇಶದಿಂದ ಚಾಕುವಿನಿಂದ 2, 3 ಬಾರಿ ಚುಚ್ಚಲು ಅಯ್ಯನ್ ಯತ್ನಿಸಿದ್ದ. ಇದನ್ನು ನೋಡಿದ ಪಾಂಡಿಯರಾಜ್ ಎಂಬವರು ಜಗಳ ಬಿಡಿಸಲು ಮುಂದಾದರು. ಅಯ್ಯನ್‌ನನ್ನು ಹಿಂಬಾಗದಿಂದ ಪಾಂಡಿಯರಾಜ್ ತಬ್ಬಿ ಹಿಡಿದುಕೊಂಡ ಸಂದರ್ಭ ಶ್ರೀವತ್ಸ ಜೀವ ಉಳಿಸಿಕೊಳ್ಳಲು ಹಿಂದೆ ಹೋಗಿ ತಪ್ಪಿಸಿಕೊಂಡರು. ಆ ಸಂದರ್ಭ ಅಯ್ಯನ್ ರಭಸವಾಗಿ ಶ್ರೀವತ್ಸಗೆ ಚುಚ್ಚಲು ಯತ್ನಿಸಿದಾಗ ಅದು ಪಾಂಡಿಯರಾಜ್ ಎದೆಗೆ ಚುಚ್ಚಿದ ಪರಿಣಾಮ ಅವರು ಮೃತಪಟ್ಟರು.
7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ರಮೇಶ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿ ಅಯ್ಯನ್‌ಗೆ 5 ವರ್ಷಗಳ ಕಠಿಣ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ನಾಗರಾಜ ವಾದಿಸಿದರು.