

ಸದೇಶ್ ಕಾರ್ಮಾಡ್ ಮೈಸೂರು
ಪ್ಲಾಸ್ಟಿಕ್ ಮುಕ್ತ ಮೈಸೂರು ನಗರ ನಿರ್ಮಾಣಕ್ಕೆ ಪಣ ತೊಟ್ಟಿರುವ ನಗರ ಪಾಲಿಕೆಯು ನಗರದಲ್ಲಿ ಪ್ಲಾಸ್ಟಿಕ್ ಬಳಸುವವರ ವಿರುದ್ಧ ದಂಡ ಪ್ರಯೋಗಕ್ಕೆ ಮುಂದಾಗಿದೆ. ನಗರ ಪಾಲಿಕೆ ನಿಷೇಧಿಸಿರುವ ಪಟ್ಟಿಯಲ್ಲಿರುವ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟದ ವಿರುದ್ಧ 4 ತಿಂಗಳ ಅವಧಿಯಲ್ಲಿ 18 ಲಕ್ಷ ರೂ. ದಂಡ ವಿಧಿಸಲಾಗಿದೆ.
ವರ್ಷದ ಹಿಂದೆ ನಗರ ಪಾಲಿಕೆ ಪ್ಲಾಸ್ಟಿಕ್ ಬಳಸುವವ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿತ್ತು. ಆ ಸಂದರ್ಭ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಪ್ರಮಾಣ ಕುಸಿತ ಕಂಡಿತ್ತು. ಆದರೆ, ನಂತರ ವಿಧಾನಸಭೆ ಚುನಾವಣೆ ಸೇರಿ ದಂತೆ ನಾನಾ ಕಾರಣಗಳಿಂದ ಪ್ಲಾಸ್ಟಿಕ್ ವಿರುದ್ಧ ಕಾರ್ಯಾಚರಣೆ ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತೆ ಪ್ಲಾಸ್ಟಿಕ್ ಬಳಕೆ ಹೆಚ್ಚಾಗ ತೊಡಗಿದ್ದನ್ನು ಗಮನಿಸಿದ ನಗರ ಪಾಲಿಕೆಯು ಇದೀಗ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಗರಿಷ್ಠ 25 ಸಾವಿರ ರೂ.ವರೆಗೆ ದಂಡ ವಿಧಿಸಲಾಗಿದೆ.
ಯಾವುದೆಲ್ಲ ನಿಷೇಧ?
ನಗರದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್ ಫಿಲ್ಮ್, ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಥರ್ಮಾಕೋಲ್, ಪ್ಲಾಸ್ಟಿಕ್ ಮೈಕ್ರೋಬೀಡ್‌ನಿಂದ ತಯಾರಾಗುವ ಇತರೆ ವಸ್ತುಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.
ಎಲ್ಲ ಪ್ಲಾಸ್ಟಿಕ್ ನಿಷೇಧವಲ್ಲ
ಪ್ಲಾಸ್ಟಿಕ್ ನಿಷೇಧ ಅಂದ ಮಾತ್ರಕ್ಕೆ ಎಲ್ಲ ಪ್ಲಾಸ್ಟಿಕ್ ಬಳಕೆ ನಿಷೇಧಿತವಲ್ಲ. ಕೆಲವೊಂದು ಉತ್ಪನ್ನಗಳನ್ನು ಪ್ಯಾಕ್ ಮಾಡಲು ಪ್ಲಾಸ್ಟಿಕ್ ಬಳಕೆ ಮಾಡಲಾಗಿರುತ್ತದೆ. ಇದಕ್ಕೆ ಸರ್ಕಾರದ ಅನುಮತಿ ಇರುವ ಹಿನ್ನೆಲೆಯಲ್ಲಿ ಅಂತಹ ಉತ್ಪನ್ನಗಳನ್ನು ನಗರದಲ್ಲಿ ಮಾರಾಟ ಮಾಡಲು ಯಾವುದೇ ರೀತಿಯ ಅಡ್ಡಿ ಇಲ್ಲ. ಈ ರೀತಿಯ ಉತ್ಪನ್ನಗಳಿಂದ ಸೃಷ್ಟಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ಬಳಕೆ ಕಾರ್ಯ ನಗರದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಬಾರ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪತಿಯಾಗುವ ಟೆಟ್ರಾಪ್ಯಾಕ್, ಮನೆಗಳಲ್ಲಿ, ಅಂಗಡಿಗಳಲ್ಲಿ ಉತ್ಪತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡಿಕೊಂಡು ನಗರದ ಸೂಯೇಜ್ ಫಾರ್ಮ್‌ನಲ್ಲಿ ಪ್ಲಾಸ್ಟಿಕ್ ಕುರ್ಚಿ, ಮೇಜು, ಬಕೆಟ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ನಗರ ಪಾಲಿಕೆ ಹಾಗೂ ಜಾಗೃತ್ ಟೆಕ್ ಸಂಸ್ಥೆಯ ಜಂಟಿಯಾಗಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಸೂಯೇಜ್ ಫಾರ್ಮ್‌ನಲ್ಲಿ ಜಾಗೃತ್ ಟೆಕ್ ಸಂಸ್ಥೆಗೆ ಯಂತ್ರೋಪಕರಣ ಅಳವಡಿಕೆಗೆ ನಗರ ಪಾಲಿಕೆ ಜಾಗ ನೀಡುವ ಜತೆಗೆ ನಗರದ ಬಾರ್‌ಗಳು, ಅಂಗಡಿಗಳು, ಮನೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ನೀಡುತ್ತಿದೆ. ನಗರ ಪಾಲಿಕೆ ಕೇವಲ ಪ್ಲಾಸ್ಟಿಕ್ ಬಳಕೆ ನಿಷೇಧ, ದಂಡ ವಿಧಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ ಪ್ಲಾಸ್ಟಿಕ್ ತ್ಯಾಜ್ಯ ಮರು ಬಳಕೆಯ ಕಡೆಗೂ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ವಿಚಾರ.
ಹೊರ ಭಾಗದಿಂದ ಪೂರೈಕೆ
ನಗರದಲ್ಲಿ ಪ್ಲಾಸ್ಟಿಕ್ ಮಾರಾಟಕ್ಕೆ ನಗರ ಪಾಲಿಕೆ ಕಡಿವಾಣ ಹಾಕುತ್ತಿರುವ ಹಿನ್ನೆಲೆಯಲ್ಲಿ ವರ್ತಕರು ನಗರದ ಹೊರ ಭಾಗದಲ್ಲಿ ಗೋದಾಮುಗಳನ್ನು ತೆರೆದು ಅಲ್ಲಿಂದ ನಗರಕ್ಕೆ ಪ್ಲಾಸ್ಟಿಕ್‌ಗಳನ್ನು ಪೂರೈಸುತ್ತಿರುವುದು ಕಂಡು ಬರುತ್ತಿದೆ. ಕೆಲವರು ಸ್ಕೂಟರ್‌ನಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಅಂಗಡಿಗಳಿಗೆ ಸರಬರಾಜು ಮಾಡುತ್ತಿರುವುದು ಕಂಡು ಬಂದಿದ್ದು, ಅಂತಹವರಿಗೆ ಇದೀಗ ದಂಡ ವಿಧಿಸಿ ಎಚ್ಚರಿಕೆ ನೀಡುವ ಕಾರ್ಯವನ್ನು ಪಾಲಿಕೆ ಮಾಡಿದೆ.
ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿಕೊಂಡು ನಗರದ ಸೌಂದರ್ಯ ಕೆಡಿಸುತ್ತಿದೆ. ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬರುತ್ತಿದೆ. ನಗರದ ಸೌಂದರ್ಯ ಕಾಪಾಡಲು ಹಾಗೂ ಪರಿಸರವನ್ನು ಉಳಿಸಲು ಪ್ರತಿಯೊಬ್ಬರು ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲು ಬಟ್ಟೆಯ ಕೈಚೀಲ ಬಳಕೆಗೆ ಆದ್ಯತೆ ನೀಡುವುದು ಉತ್ತಮ.
ದಂಡದ ಪ್ರಮಾಣ
ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಬಳಿಸಿದರೆ ಮೊದಲ ಬಾರಿ 200 ರೂ., 2ನೇ ಬಾರಿ 500 ರೂ. ದಂಡ ವಿಧಿಸಲಾಗುವುದು. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳು ಬಳಸಿದರೆ ಕ್ರಮವಾಗಿ 500 ರೂ., 1,000 ರೂ., ವಾಣಿಜ್ಯೋದ್ಯಮಿಗಳಿಗೆ 5,000 ರೂ., 10,000 ರೂ., ಮಾರಾಟ ಅಥವಾ ವಿತರಣೆ ಮಾಡುವವರಿಗೆ 25,000 ರೂ., 50,000 ರೂ., ಸಂಗ್ರಹಣೆ ಅಥವಾ ಸಾಗಾಣಿಕೆ ಮಾಡುವವರಿಗೆ 50,000 ರೂ., 1,00,000 ರೂ., ಪ್ಲಾಸ್ಟಿಕ್ ತಯಾರಿಸುವ ಯಾವುದೇ ಕೈಗಾರಿಕೆ ಅಥವಾ ವ್ಯಕ್ತಿಗಳಿಗೆ ಮೊದಲ ಬಾರಿಗೆ 1,00,000 ರೂ., ಎರಡನೇ ಬಾರಿಗೆ 2,00,000 ರೂ. ದಂಡ ವಿಧಿಸಲಾಗುವುದು.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ವರ್ತಕರಿಗೆ ದಂಡ ವಿಧಿಸಲಾಗುತ್ತಿದ್ದು, 4 ತಿಂಗಳ ಅವಧಿಯಲ್ಲಿ 18 ಲಕ್ಷ ರೂ. ದಂಡ ವಿಧಿಸಲಾಗಿದೆ. ದಂಡ ವಿಧಿಸಿದರೂ ನಗರದಲ್ಲಿ ಸಾಕಷ್ಟು ವರ್ತಕರು ಹಾಗೂ ಗ್ರಾಹಕರು ಪ್ಲಾಸ್ಟಿಕ್ ಬಳಕೆ ಮುಂದುವರೆಸುತ್ತಿರುವುದು ಕಂಡು ಬಂದಿದೆ. ಮುಂದಿನ ಹಂತದಲ್ಲಿ ಗ್ರಾಹಕರಿಗೂ ದಂಡ ವಿಧಿಸಿ ನಗರದಲ್ಲಿ ಪ್ಲಾಸ್ಟಿಕ್‌ಅನ್ನು ನಿಯಂತ್ರಣಕ್ಕೆ ತರಲು ಕ್ರಮ ವಹಿಸಲಾಗುವುದು.
ಡಾ.ಡಿ.ಜಿ. ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ