ಮೈಸೂರು ಪಾಲಿಕೆ ಅಧಿಕಾರಾವಧಿ ನವೆಂಬರ್‌ಗೆ ಅಂತ್ಯ

mcc (3)
Published on


ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆಯ ಈ ಬಾರಿಯ ಕೌನ್ಸಿಲ್‌ನ ಅಧಿಕಾರಾವಧಿ ನವೆಂಬರ್ 16ಕ್ಕೆ ಮುಕ್ತಾಯಗೊಳ್ಳಲಿದ್ದು, 5 ವರ್ಷಗಳ ಆಡಳಿತದಲ್ಲಿ ನಗರ ಪಾಲಿಕೆಯು ಹಲವು ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಈ ಬಾರಿ ಪಾಲಿಕೆಯಲ್ಲಿ ಎಲ್ಲ ಪಕ್ಷಗಳಿಗೂ ಅಧಿಕಾರ ದೊರೆತ್ತಿದ್ದು ವಿಶೇಷ.

ನಗರ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018 ರಂದು ಚುನಾವಣೆ ನಡೆಯಿತು. ನವೆಂಬರ್ 17 ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಹಾಗಾಗಿ ಈ ಬಾರಿಯ ಕೌನ್ಸಿಲ್‌ನ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಳ್ಳಲಿದೆ. 4ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಅಧಿಕಾರಾವಧಿ ಸೆ.5ಕ್ಕೆ ಕೊನೆಗೊಳ್ಳಲಿದೆ.

ಹಲವು ರಾಜಕೀಯ ವಿದ್ಯಮಾನ

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಸಹಜವಾಗಿಯೇ ಪಾಲಿಕೆಯ ಮೊದಲ ಎರಡು ಅವಧಿಯಲ್ಲಿ ಈ ಎರಡು ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿತು. ಆದರೆ, 3ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆ ಸಂದರ್ಭ ಮೈತ್ರಿ ಸರ್ಕಾರ ಪಥನಗೊಂಡ ಹಿನ್ನೆಲೆಯಲ್ಲಿ ಒಡಂಬಡಿಕೆ ಪ್ರಕಾರ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ಆಸಕ್ತಿ ತೋರಲಿಲ್ಲ. ಕಾಂಗ್ರೆಸ್‌ಗೆ ಮೇಯರ್ ಸ್ಥಾನ ನೀಡದಿದ್ದರೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದರೂ ಶಾಸಕ ತನ್ವೀರ್ ಸೇಠ್ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟರು. ಈ ರಾಜಕೀಯ ಬೆಳವಣಿಗೆ ತವರು ಜಿಲ್ಲೆಯಲ್ಲಿಯೇ ಸಿದ್ದರಾಮಯ್ಯಗೆ ತೀವ್ರ ಮುಖಭಂಗ ಉಂಟು ಮಾಡಿತು.

ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮರೆಮಾಚಿದ ಹಿನ್ನೆಲೆಯಲ್ಲಿ 3ನೇ ಅವಧಿಯಲ್ಲಿ ಮೇಯರ್ ಆಗಿ ಆಯ್ಕೆಗೊಂಡಿದ್ದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಸದಸ್ಯತ್ವ ಕಳೆದುಕೊಂಡರು. ನಂತರ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿತು. ಹೀಗಾಗಿ ಮೇಯರ್ ಸ್ಥಾನಕ್ಕೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದಾಗ ಹೆಚ್ಚು ಮತ ಪಡೆದ ಬಿಜೆಪಿಯ ಸುನಂದಾ ಪಾಲನೇತ್ರ ಮೇಯರ್ ಸ್ಥಾನ ಅಲಂಕರಿಸಿದರು. 4ನೇ ಅವಧಿಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮೇಯರ್ ಸ್ಥಾನಕ್ಕೆ ಪಟ್ಟುಹಿಡಿದು ಹಿಡಿದು ಜೆಡಿಎಸ್ ಸಹಕಾರದೊಂದಿಗೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಯಿತು.

4 ಅವಧಿ 6 ಮೇಯರ್..!

ಒಟ್ಟು 5 ವರ್ಷಗಳ ಅವಧಿಯಲ್ಲಿ 5 ಮೇಯರ್ ಹಾಗೂ 5 ಉಪ ಮೇಯರ್‌ಗಳು ಆಯ್ಕೆಗೊಳ್ಳಬೇಕಾಗಿತ್ತು. ಆದರೆ, ಹಲವು ರಾಜಕೀಯ ಕಾರಣಗಳಿಗೊಸ್ಕರ ಈ ಬಾರಿ ಕೇವಲ 4 ಅವಧಿಯಲ್ಲಿಯೇ 6 ಮೇಯರ್‌ಗಳು ಹಾಗೂ 5 ಉಪ ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿದೆ. 4ನೇ ಅವಧಿಯ ಮೇಯರ್ ಸ್ಥಾನಕ್ಕೆ ಸಕಾಲದಲ್ಲಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ 3ನೇ ಅವಧಿಯಲ್ಲಿ ಹಂಗಾಮಿ ಮೇಯರ್ ಸೇರಿದಂತೆ ಮೂವರು ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿತು. 3ನೇ ಅವಧಿ ಒಂದು ವರ್ಷಕ್ಕೆ ಮುಕ್ತಾಯಗೊಳ್ಳಬೇ ಕಾಗಿತ್ತು. ಆದರೆ, ಈ ಅವಧಿಯಲ್ಲಿ ಮೂವರು ಮೇಯರ್‌ಗಳು (ರುಕ್ಮಿಣಿ ಮಾದೇಗೌಡ, ಅನ್ವರ್ ಬೇಗ್, ಸುನಂದ ಪಾಲನೇತ್ರ) ಒಟ್ಟಾರೆ 1 ವರ್ಷ 6 ತಿಂಗಳು ಅಧಿಕಾರ ನಡೆಸಿದರು. ಅಲ್ಲದೆ 2 ಹಾಗೂ 3ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಸಲು ಕ್ರಮವಾಗಿ 2, 1 ತಿಂಗಳು ವಿಳಂಬವಾಯಿತು. ಹೀಗಾಗಿ 5ನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆದರೆ ಅವರಿಗೆ ಕೇವಲ 3 ತಿಂಗಳು ಮಾತ್ರ ಅಧಿಕಾರಾವಧಿ ದೊರೆಯುವ ಸಾಧ್ಯತೆ ಇದೆ. ಕೇವಲ 3 ತಿಂಗಳಿಗೊಸ್ಕರ ಚುನಾವಣೆ ನಡೆಸುವ ಸಾಧ್ಯತೆ ಕಡಿಮೆ.

ಇತಿಹಾಸ ನಿರ್ಮಿಸಿದ ಬಿಜೆಪಿ

ನಗರ ಪಾಲಿಕೆ ಇತಿಹಾಸದಲ್ಲಿ ಬಿಜೆಪಿ ಮೇಯರ್ ಸ್ಥಾನವನ್ನು ಅಲಂಕರಿಸಿರಲಿಲ್ಲ. ಆದರೆ, ಈ ಬಾರಿಯ ಕೌನ್ಸಿಲ್‌ನಲ್ಲಿ ಎರಡು ಬಾರಿ ಮೇಯರ್ ಸ್ಥಾನವನ್ನು ಪಡೆಯುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಿತು. ಬಿಜೆಪಿಯ ಸುನಂದಾ ಪಾಲನೇತ್ರ ಹಾಗೂ ಶಿವಕುಮಾರ್ ಮೇಯರ್ ಆಗಿ ಅಧಿಕಾರ ನಡೆಸಿದರು. ಪಾಲಿಕೆ ಇತಿಹಾಸದಲ್ಲಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಬಿಜೆಪಿಗೆ ಒಂದೇ ಅವಧಿಯಲ್ಲಿ ದೊರೆತ್ತಿರಲಿಲ್ಲ. ಆದರೆ, ಈ ಬಾರಿ ನಡೆದ ರಾಜಕೀಯ ವಿದ್ಯಮಾನದಿಂದ ಮೇಯರ್ ಸ್ಥಾನವನ್ನು ಬಿಜೆಪಿಯ ಶಿವಕುಮಾರ್ ಅಲಂಕರಿಸಿದರೆ, ಉಪ ಮೇಯರ್ ಸ್ಥಾನವನ್ನು ಬಿಜೆಪಿಯ ಡಾ.ಜಿ. ರೂಪಾ ಅಲಂಕರಿಸಿದರು. 4ನೇ ಅವಧಿಯಲ್ಲಿ ಉಪ ಮೇಯರ್ ಸ್ಥಾನವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಆದರೆ, ಬಿಸಿಎ ಮಹಿಳೆಗೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಗೊಂಡಿದ್ದ ಜೆಡಿಎಸ್‌ನ ರೇಷ್ಮಾ ಬಾನು ನಾಮಪತ್ರ ಸಲ್ಲಿಸಿದ್ದರು. ಆದರೆ, ಇವರು ನಾಮಪತ್ರದ ಜತೆಗೆ ಜಾತಿ ಪ್ರಮಾಣ ಸಲ್ಲಿಸದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತಗೊಂಡಿತು. ಹೀಗಾಗಿ ಡಾ.ಜಿ. ರೂಪಾ ಉಪ ಮೇಯರ್ ಸ್ಥಾನ ಅಲಂಕರಿಸಿ ದರು.

ಪ್ರಥಮ ಮುಸ್ಲಿಂ ಮಹಿಳೆ ಮೇಯರ್

ನಗರ ಪಾಲಿಕೆ ಇತಿಹಾಸದಲ್ಲಿ ಮುಸ್ಲಿಂ ಮಹಿಳೆ ಮೇಯರ್ ಸ್ಥಾನ ಅಲಂಕರಿಸಿರಲಿಲ್ಲ. ಆದರೆ, ಪ್ರಥಮ ಬಾರಿಗೆ ಜೆಡಿಎಸ್‌ನ ತಸ್ನಿ ಮೇಯರ್‌ಆಗಿ ಇತಿಹಾಸ ನಿರ್ಮಿಸಿದರು. ಆದರೆ, ಇವರ ಅಧಿಕಾರಾವಧಿ ಸಂದರ್ಭ ಕೋವಿಡ್ ಸೋಂಕು ಎದುರಾದ ಹಿನ್ನೆಲೆಯಲ್ಲಿ ಅಧಿಕಾರದ ಬಹುಪಾಲು ಸಮಯ ಲಾಕ್‌ಡೌನ್‌ನಲ್ಲೇ ಕಳೆದು ಹೋಯಿತು.

2 ಉಪ ಚುನಾವಣೆ

ನಕಲಿ ಜಾತಿ ಪ್ರಮಾಣ ಪತ್ರ ನೀಡಿ ವಾರ್ಡ್ ನಂ.18ರಿಂದ (ಯಾದವಗಿರಿ) ಆಯ್ಕೆಗೊಂಡಿದ್ದ ಬಿಜೆಪಿಯ ಗುರುವಿನಾಯಕ ಸದಸ್ಯತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಬಿ.ವಿ. ರವೀಂದ್ರ ಗೆಲುವು ಸಾಧಿಸಿದರು. ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮರೆಮಾಚಿ 36ನೇ ವಾರ್ಡ್‌ನಿಂದ (ಯರಗನಹಳ್ಳಿ ಅಂಬೇಡ್ಕರ್ ಕಾಲೋನಿ) ಆಯ್ಕೆಗೊಂಡಿದ್ದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಸದಸ್ಯತ್ವ ಕಳೆದುಕೊಂಡರು. ತೆರವುಗೊಂಡ ಸ್ಥಾನಕ್ಕೆ 3 ಸೆಪ್ಟೆಂಬರ್ 2021 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಗೆಲುವು ಸಾಧಿಸಿದರು.

ಅವಧಿ ಮೇಯರ್ ಉಪ ಮೇಯರ್ ಅಧಿಕಾರ ಸ್ವೀಕಾರ


1 ಪುಷ್ಪಾಲತಾ ಜಗನ್ನಾಥ್ (ಕಾಂಗ್ರೆಸ್) ಶಫಿ ಅಹಮ್ಮದ್ (ಜೆಡಿಎಸ್) 17-11-2018

2 ತಸ್ನಿಂ (ಜೆಡಿಎಸ್) ಸಿ.ಶ್ರೀಧರ್ (ಕಾಂಗ್ರೆಸ್) 18-01-2020

3 ರುಕ್ಮಿಣಿ ಮಾದೇಗೌಡ (ಜೆಡಿಎಸ್) ಅನ್ವರ್ ಬೇಗ್ (ಕಾಂಗ್ರೆಸ್) 24-2-2021
ಅನ್ವರ್ ಬೇಗ್ (ಹಂಗಾಮಿ ಮೇಯರ್) 11 -6-2021
ಸುನಂದಾ ಪಾಲನೇತ್ರ (ಬಿಜೆಪಿ) ಅನ್ವರ್ ಬೇಗ್ (ಕಾಂಗ್ರೆಸ್) 25-8-2021

4 ಶಿವಕುಮಾರ್ (ಬಿಜೆಪಿ) ಡಾ.ಜಿ. ರೂಪಾ (ಬಿಜೆಪಿ) 6-9-2022

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net