

ಮೈಸೂರು: ತೆರಿಗೆ ವಸೂಲಾತಿಗೆ ಒತ್ತು ನೀಡುವ ಜತೆಗೆ ಹೊಸ ಆದಾಯದ ಮೂಲ ಕಂಡುಕೊಳ್ಳಬೇಕು ಎಂದು ಮಾಜಿ ಮೇಯರ್‌ಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ನಗರ ಪಾಲಿಕೆಗೆ ಸಲಹೆ ನೀಡಿದ್ದಾರೆ.
ನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ 2023-24ನೇ ಸಾಲಿನ ಪರಿಷ್ಕೃತ ಹಾಗೂ 2024-25ನೇ ಸಾಲಿನ ಅಂದಾಜು ಆಯವ್ಯಯದ ಬಗ್ಗೆ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ನಗರದ ಅಭಿವೃದ್ಧಿ ಕುರಿತು ಹಲವರು ಸಲಹೆ ನೀಡಿದರು.
ತೆರಿಗೆ ವಸೂಲಾತಿ ಮಾಡಿ: ನಗರದಲ್ಲಿ ಸಾಕಷ್ಟು ರೆವಿನ್ಯೂ ಬಡಾವಣೆಗಳು ಇದ್ದು, ಬಡಾವಣೆಗಳಿಗೆ ಮೂಲಸೌಲಭ್ಯಗಳನ್ನು ಪಾಲಿಕೆ ಒದಗಿಸುತ್ತಿದೆ. ಹೀಗಿದ್ದರೂ ಅಲ್ಲಿಂದ ಆಸ್ತಿ ತೆರಿಗೆ ವಸೂಲಾತಿ ಮಾಡಲು ಪಾಲಿಕೆ ಆಸಕ್ತಿ ತೋರುತ್ತಿಲ್ಲ. ನಗರದಲ್ಲಿ ರೆವಿನ್ಯೂ ಬಡಾವಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿದೆ. ಎಲ್ಲ ಮನೆಗಳಿಂದ ಆಸ್ತಿ ತೆರಿಗೆ ವಸೂಲಾತಿಯಾದರೆ ಪಾಲಿಕೆಯ ಆದಾಯ ವೃದ್ಧಿಯಾಗಲಿದ್ದು, ಇದರಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಎಂದು ಮಾಜಿ ಮೇಯರ್‌ಗಳಾದ ಶ್ರೀಕಂಠಯ್ಯ, ಬಿ.ಎಲ್. ಭೈರಪ್ಪ ಅಭಿಪ್ರಾಯಪಟ್ಟರು.
ಪೇ ಆ್ಯಂಡ್ ಪಾರ್ಕ್: ನಗರದಲ್ಲಿ ವಾಹನಗಳ ನಿಲುಗಡೆಗೆ ಸಮಸ್ಯೆ ಎದುರಾಗುತ್ತಿದ್ದು, ವಿವಿಧೆಡೆ ಮಲ್ಟಿಲೆವಲ್ ಪಾರ್ಕಿಂಗ್ ಕಟ್ಟಡಗಳನ್ನು ನಿರ್ಮಾಣ ಮಾಡಬೇಕು ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಪೇ ಆ್ಯಂಡ್ ಪಾರ್ಕ್ ವ್ಯವಸ್ಥೆ ಜಾರಿಗೊಳಿಸಬೇಕು. ಇದರಿಂದ ನಗರ ಪಾಲಿಕೆಯ ಆದಾಯ ವೃದ್ಧಿಯಾಗಲಿದೆ ಎಂದು ಮಾಜಿ ಮೇಯರ್‌ಗಳಾದ ಆರ್.ಲಿಂಗಪ್ಪ, ಬಿ.ಕೆ. ಪ್ರಕಾಶ್ ಸಲಹೆ ನೀಡಿದರು.