ಜಿಲ್ಲೆಗೂ ಅಂಟಿದ ‘ಮುಂಬೈ ಕರೊನಾ’ ನಂಟು

2
Published on

ಕ್ವಾರಂಟೈನ್ ಆಗಿದ್ದ ವ್ಯಕ್ತಿಗೆ ಸೋಂಕು, ಆತಂಕ ಬೇಡ ಎಂದ ಜಿಲ್ಲಾಧಿಕಾರಿ

ಮೈಸೂರು: ನೆರೆಯ ಮಂಡ್ಯವನ್ನು ವ್ಯಾಪಕವಾಗಿ ಕಾಡುತ್ತಿರುವ ‘ಮುಂಬೈ ಕರೊನಾ’ ನಂಟು ಜಿಲ್ಲೆಗೂ ಅಂಟಿದ್ದು, ಅಲ್ಲಿಂದ ಬಂದ ವ್ಯಕ್ತಿಗೆ (ಪಿ-1225) ವೈರಸ್ ಇರುವುದು ದೃಢಪಟ್ಟಿದೆ.
ಅಲ್ಲದೆ, ಇವರೊಂದಿಗೆ ಕ್ವಾರಂಟೈನ್ ಆಗಿದ್ದ ಮತ್ತೊಬ್ಬ ವ್ಯಕ್ತಿಯನ್ನು ವೈದ್ಯರು ತಪಾಸಣೆಗಾಗಿ ಕರೆದೊಯ್ದಿದ್ದು, ಅವರ ಫಲಿತಾಂಶ ಬರಬೇಕಿದೆ.
ಇದರಿಂದ ಹದಿನೆಂಟು ದಿನಗಳಿಂದ ಕರೊನಾ ವೈರಸ್ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಮಹಾಮಾರಿ ವಕ್ಕರಿಸಿದ್ದರಿಂದ ಜನರಲ್ಲಿಯೂ ಮತ್ತೆ ಆತಂಕ ಶುರುವಾಗಿದೆ. ಆದರೆ, ಮುಂಬೈನಿಂದ ಬಂದು ಕೆ.ಆರ್.ನಗರ ತಾಲೂಕಿನ ಶಾಲೆಯೊಂದರಲ್ಲಿ ಕ್ವಾರಂಟೈನ್ ಆಗಿದ್ದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿರುವುದರಿಂದ ಅದು ಇತರರಿಗೆ ವ್ಯಾಪಿಸಿಲ್ಲ ಎನ್ನುವುದು ಸದ್ಯಕ್ಕೆ ಸಮಾಧಾನ ತಂದಿದೆ.
ಕೆ.ಆರ್.ನಗರ ತಾಲೂಕಿನಿಂದ ಉದ್ಯೋಗಕ್ಕಾಗಿ ಮುಂಬೈಗೆ ತೆರಳಿದ್ದ ವ್ಯಕ್ತಿ, ಮೇ 16ರಂದು ಜಿಲ್ಲೆಗೆ ಆಗಮಿಸಿದ್ದರು. ಇವರನ್ನು ಹಾಸನ ಜಿಲ್ಲೆಯ ಗಡಿಯಲ್ಲಿ ತಡೆದು ತಪಾಸಣೆ ಮಾಡಿದ ಬಳಿಕ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಒಟ್ಟು 21 ಜನರಲ್ಲಿ 46 ವರ್ಷ ವ್ಯಕ್ತಿಗೆ ವೈರಸ್ ಇರುವುದು ದೃಢಪಟ್ಟಿದೆ. ಹೀಗಾಗಿ ಇವರೊಂದಿಗೆ ಕ್ವಾರಂಟೈನ್‌ನಲ್ಲಿದ್ದ ಮತ್ತೊಬ್ಬನನ್ನು ವೈದ್ಯರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತಂಕಪಡಬೇಕಿಲ್ಲ:
ಆರಂಭಿಕ ಹಂತದಲ್ಲಿ ಬೆಂಗಳೂರು ಹೊರತುಪಡಿಸಿ ಇಡೀ ದೇಶದ ಗಮನ ಸೆಳೆದಿದ್ದ ನಂಜನಗೂಡು ಜುಬಿಲೆಂಟ್ ಕಾರ್ಖಾನೆ ನಂಜಿನಿಂದ 90 ಜನರಲ್ಲಿ ಸೊಂಕು ಕಾಣಿಸಿಕೊಂಡು ಮೈಸೂರು ಜಿಲ್ಲೆ ಕೆಂಪು ವಲಯದಲ್ಲಿ ಗುರುತಿಸಿಕೊಂಡಿತ್ತು. ಆದರೆ, ಜಿಲ್ಲಾಡಳಿತದ ಸತತ ಶ್ರಮದಿಂದ ವೈರಸ್ ನಿಯಂತ್ರಿಸಲು ಯಶಸ್ವಿಯಾಗಿದ್ದರಿಂದ 18 ದಿನಗಳಿಂದ ಯಾವುದೇ ಪ್ರಕರಣ ಕಂಡುಬಾರದೆ ಜಿಲ್ಲೆ ಕಿತ್ತಲೆ ವಲಯದಲ್ಲಿ ಗುರುತಿಸಿಕೊಂಡಿತ್ತು.
ಈಗ ವೈರಸ್ ದೃಢಪಟ್ಟಿರುವ ವ್ಯಕ್ತಿ, ಬೇರೆ ಎಲ್ಲಿಯೂ ಓಡಾಟ ನಡೆಸಿಲ್ಲ. ಹಾಗಾಗಿ ವೈರಸ್ ಬೇರೆ ಕಡೆ ಹರಡುವ ಭೀತಿ ಇಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಕಟ್ಟುನಿಟ್ಟಿನ ಕ್ವಾರಂಟೈನ್:
ಲಾಕ್‌ಡೌನ್ ಸಡಿಲಿಕೆ ಬಳಿಕ ಹೊರ ಜಿಲ್ಲೆ, ಹೊರ ರಾಜ್ಯದಿಂದ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ, ಹೊರ ರಾಜ್ಯಗಳಿಂದ ಆಗಮಿಸುವವರ ಮೇಲೆ ತೀವ್ರ ನಿಗಾ ಇಟ್ಟಿದೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮಾಡಿ ಕ್ವಾರಂಟೈನ್‌ನಲ್ಲಿರಿಸಲಾಗುತ್ತಿದೆ. ಈಗಾಗಲೇ 623 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net