

ಸದೇಶ್ ಕಾರ್ಮಾಡ್ ಮೈಸೂರು
ದೇಶದ ಸ್ವಚ್ಛ ನಗರಗಳ ಪೈಕಿ ಒಂದಾಗಿರುವ ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛತೆಯಲ್ಲಿ ಪ್ರತಿ ಬಾರಿ ದೇಶದ ಗಮನ ಸೆಳೆಯುತ್ತಲೇ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಮಗ್ರ ವಿಭಾಗದಲ್ಲಿ ಮತ್ತೆ ದೇಶದ ನಂ.1 ನಗರವಾಗಿ ಹೊರ ಹೊಮ್ಮಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವಾಗಿರುವ ಅಂಶಗಳನ್ನು ಒಂದೊಂದಾಗಿ ಸರಿಪಡಿಸುವ ಕಾರ್ಯಕ್ಕೆ ನಗರ ಪಾಲಿಕೆ ಕೈ ಹಾಕಿದ್ದು, ಇದರ ಭಾಗವಾಗಿ ಇದೀಗ ತ್ಯಾಜ್ಯ ವಿಲೇವಾರಿಗೆ ‘ಕಮಾಂಡ್ ಸೆಂಟರ್’ ಪ್ರಾರಂಭಿಸಲು ಸಿದ್ಧತೆ ಕೈಗೊಂಡಿದೆ.
ಪ್ರತಿಯೊಂದು ವಾರ್ಡ್‌ಗಳಲ್ಲೂ ಇದೀಗ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಕೆಲವು ಕಡೆಗಳಲ್ಲಿ ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್‌ಗಳು ಪ್ರತಿನಿತ್ಯ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುತ್ತಿಲ್ಲ ಎಂಬ ದೂರುಗಳು ಸಹ ಕೇಳಿ ಬರುತ್ತಿದೆ. ತ್ಯಾಜ್ಯ ವಿಲೇವಾರಿಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ನಗರ ಪಾಲಿಕೆಯು ಪ್ರತಿಯೊಂದು ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮುಂದಾ ಗಿದೆ. ಈಗಾಗಲೇ ಹಳೆಯ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಇದೆ. ಆದರೆ, ಇತ್ತೀಚೆಗೆ ಸಾಕಷ್ಟು ಸಂಖ್ಯೆಯಲ್ಲಿ ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ. ಎಲ್ಲ ವಾರ್ಡ್‌ಗಳಿಗೂ ಹೊಸ ಟ್ರಾೃಕ್ಟರ್ ನೀಡಲಾಗಿದೆ. ಅಲ್ಲದೆ 280 ಆಟೋ ಟಿಪ್ಪರ್‌ಗಳನ್ನು ಖರೀದಿ ಮಾಡ ಲಾಗಿದೆ. ಇವುಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ ನಡೆದಿರಲಿಲ್ಲ. ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಿ ನಂತರ ವಾಹನಗಳ ಮೇಲೆ ಕಣ್ಣಿಡಲು ‘ಕಮಾಂಡ್ ಸೆಂಟರ್’ ತೆರೆಯಲು ಪಾಲಿಕೆ ಸಿದ್ಧತೆ ನಡೆಸಿದ್ದು, ಇದಕೋಸ್ಕರ ಟೆಂಡರ್ ಕರೆಯಲು ಮುಂದಾಗಿದೆ.
ಈ ‘ಕಮಾಂಡ್ ಸೆಂಟರ್’ ಕಂಟ್ರೋಲ್ ರೂಂ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಯಾವ ವಾಹನ ಇಂದು ಎಷ್ಟು ಗಂಟೆಗೆ ಮನೆ ಮನೆಯಿಂದ ತ್ಯಾಜ್ಯ ಸಂಗ್ರಹಿಸಲು ಹೊರಟಿದೆ? ಅವರಿಗೆ ಸೂಚಿಸಿರುವ ಎಲ್ಲ ಮಾರ್ಗಗಳಲ್ಲೂ ಸಂಚರಿಸಿದ್ದಾರೆಯೇ? ಎಷ್ಟು ಗಂಟೆಗೆ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ವಾಹನಗಳು ಹಿಂತಿರುಗಿವೆ ಎಂಬ ಮಾಹಿತಿಯನ್ನು ಮೊಬೈಲ್‌ನಲ್ಲಿಯೇ ಇನ್ನು ಮುಂದೆ ವೀಕ್ಷಿಸಬ ಹುದು. ಹಾಗಾಗಿ ಇನ್ನು ಮುಂದೆ ಹಾಜರಾತಿ ಹಾಕಿ ನಂತರ ತ್ಯಾಜ್ಯ ಸಂಗ್ರಹಿಸಲು ತೆರಳದೆ ಇದ್ದರೆ ಅಂತಹ ಪೌರ ಕಾರ್ಮಿಕರಿಗೆ ಹಾಜರಾತಿ ದೊರೆಯುವುದಿಲ್ಲ. ಅಲ್ಲದೆ, ಇದರಿಂದ ಡೀಸೆಲ್ ಬಳಕೆಯ ದುಂದುವೆಚ್ಚಕ್ಕೂ ಕಡಿವಾಣ ಹಾಕಬಹುದು.
ಪೌರ ಕಾರ್ಮಿಕರು ಪ್ರತಿನಿತ್ಯ ತ್ಯಾಜ್ಯವನ್ನು ಮನೆ ಮನೆಗಳಿಂದ ಸಂಗ್ರಹಿಸುತ್ತಾರೆ. ಹೀಗಿದ್ದರೂ ಜನರು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆಯು ತ್ಯಾಜ್ಯ ಸುರಿಯುವ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ. ಮನಬಂದಂತೆ ತ್ಯಾಜ್ಯ ಸುರಿಯುವವರಿಗೆ ಇನ್ನು ಮುಂದೆ ದಂಡ ಬೀಳಲಿದೆ. ಅದೇ ರೀತಿ ವಿದ್ಯಾರಣ್ಯಪುರಂ, ಕೆಸರೆ ಮತ್ತು ರಾಯನಕೆರೆ ತ್ಯಾಜ್ಯ ಸಂಸ್ಕರಣಾ ಘಟಕಗಳ ಪ್ರಮುಖ ದ್ವಾರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಇಲ್ಲಿಗೆ ಪಾಲಿಕೆಯ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಎಷ್ಟು ವಾಹನಗಳು ಆಗಮಿಸಿವೆ? ಎಷ್ಟು ತ್ಯಾಜ್ಯವನ್ನು ತಂದಿದ್ದಾರೆ ಎಂಬುದನ್ನು ತಿಳಿಯಲು ವೇ ಬ್ರಿಡ್ಜ್ ನಿರ್ಮಾಣ ಮಾಡಲಾಗುವುದು. ಹೀಗಾಗಿ ನಗರದಲ್ಲಿ ಪ್ರತಿನಿತ್ಯ ಎಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ? ಎಷ್ಟು ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ ಎಂಬ ನಿಖರವಾದ ಮಾಹಿತಿ ಲಭ್ಯವಾಗುತ್ತದೆ.
2015, 2016ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆಯ ಸಮಗ್ರ ವಿಭಾಗದಲ್ಲಿ ನಗರ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. 2017ರಲ್ಲಿ 5ನೇ ಸ್ಥಾನ, 2019ರಲ್ಲಿ 3ನೇ ಸ್ಥಾನ, 2020ರಲ್ಲಿ 5ನೇ ಸ್ಥಾನ, 2021ರಲ್ಲಿ 11ನೇ ಸ್ಥಾನ, 2022ರಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ.
ನಗರ ಸ್ವಚ್ಛತೆಯಲ್ಲಿ ಸಾಕಷ್ಟು ಉತ್ತಮ ಸಾಧನೆಗಳನ್ನು ತೋರಿದರೂ ಮತ್ತಷ್ಟು ಸುಧಾರಣೆಗಳು ಕಾಣಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಪ್ರತಿಯೊಂದು ಮನೆಗಳಿಂದ ತ್ಯಾಜ್ಯ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ತಿಳಿದುಕೊಳ್ಳಲು ಕಸ ಸಂಗ್ರಹಿಸುವ ಪ್ರತಿಯೊಂದು ವಾಹನಗಳಿಗೆ ಜಿಪಿಎಸ್ ಅಳವಡಿಸಿ ವಾಹನಗಳ ಸಂಪೂರ್ಣ ಮಾಹಿತಿಯನ್ನು ಕುಳಿತಲ್ಲೇ ಪಡೆಯಲು ಯೋಜನೆ ರೂಪಿಸ ಲಾಗಿದೆ. ಈ ವ್ಯವಸ್ಥೆಯಿಂದ ನಗರದಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿಯಲ್ಲಿ ಸಾಕಷ್ಟು ಸುಧಾರಣೆ ಕಾಣುವ ನಿರೀಕ್ಷೆಯನ್ನು ಹೊಂದಿದ್ದೇವೆ.
ಶಿವಕುಮಾರ್, ಮೇಯರ್
ಸ್ವಚ್ಛತೆಗೆ ಸಂಬಂಧಿಸಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ. ಹಳೆಯ ವಾಹನಗಳಿಗೆ ಮಾತ್ರ ಪ್ರಸ್ತುತ ಜಿಪಿಎಸ್ ಇದ್ದು, ಹೊಸ ಎಲ್ಲ ವಾಹನಗಳಿಗೂ ಸದ್ಯದಲ್ಲಿಯೇ ಜಿಪಿಎಸ್ ಅಳವಡಿಕೆ ಕಾರ್ಯ ನಡೆಯಲಿದೆ. ಜಿಪಿಎಸ್ ಅಳವಡಿಕೆಯಿಂದ ಈ ವಾಹನಗಳು ಯಾವ ಮಾರ್ಗದಲ್ಲಿ ಸಂಚರಿಸಿವೆ? ಎಷ್ಟು ಗಂಟೆ ಸಂಚರಿಸಿವೆ ಎಂಬ ನಿಖರವಾದ ಮಾಹಿತಿ ಪಡೆಯಲು ಸಾಧ್ಯ. ಇದರ ಆಧಾರದಲ್ಲಿಯೇ ಪೌರ ಕಾರ್ಮಿಕರಿಗೆ ಹಾಜರಾತಿ ನೀಡಲಾಗುವುದು. ಅಲ್ಲದೆ, ಡೀಸೆಲ್ ಬಳಕೆಯ ಕುರಿತು ನಿಖರವಾದ ಮಾಹಿತಿ ದೊರೆಯುತ್ತದೆ.
ಡಾ.ಡಿ.ಜಿ. ನಾಗರಾಜ್, ಆರೋಗ್ಯಾಧಿಕಾರಿ, ನಗರ ಪಾಲಿಕೆ