

ಮೈಸೂರು: ಕರೊನಾ ವೈರಸ್ ಭೀತಿಯಿಂದ ಅಂಬಾ ವಿಲಾಸ ಅರಮನೆ, ಮೃಗಾಲಯ ಬಂದ್ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವಾಸಿಗರ ಆಗಮನ ಸಂಪೂರ್ಣ ಕ್ಷೀಣಗೊಂಡಿದೆ.
ಸದಾ ಜನರಿಂದ ಗಿಜಿಗುಡುತ್ತಿದ್ದ ಸ್ಥಳಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದು, ಬಂದ್ ರೀತಿಯ ವಾತಾವರಣ ಕಂಡು ಬರುತ್ತಿದೆ. ಸಾರ್ವಜನಿಕರು ಗುಂಪುಗೂಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಒಂದು ವಾರ ಕಾಲ ಶಾಪಿಂಗ್ ಮಾಲ್, ಚಿತ್ರಮಂದಿರಗಳು, ಪಬ್ ಮತ್ತು ನೈಟ್ ಕ್ಲಬ್‌ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್, ಪ್ರದರ್ಶನ ಕೇಂದ್ರಗಳು, ಈಜುಕೊಳ, ಆಟದ ಕೇಂದ್ರಗಳು, ಕ್ರೀಡಾ ಚಟುವಟಿಕೆಗಳು, ಬೇಸಿಗೆ ಶಿಬಿರ, ನಾಟಕ ಪ್ರದರ್ಶನ, ಸಮಾವೇಶಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ವಿವಾಹ, ನಿಶ್ಚಿತಾರ್ಥ, ಸಭೆ, ಸಮಾರಂಭಗಳನ್ನು ಸಹ ನಿಷೇಧಿಸಲಾಗಿದೆ. ಹೀಗಾಗಿ ಜನರಿಲ್ಲದೆ ನಗರ ಭಣಗುಡುತ್ತಿದೆ.
ಜನ ಸಂಚಾರ ಕ್ಷೀಣ: ನಗರದಲ್ಲಿ ಶನಿವಾರಕ್ಕಿಂತ ಭಾನುವಾರ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಆಗ್ರಾದ ತಾಜ್‌ಮಹಲ್ ನಂತರ ದೇಶದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಅಂಬಾವಿಲಾಸ ತನ್ನತ್ತ ಆಕರ್ಷಿಸುತ್ತದೆ. ಆದರೆ, ಅಂಬಾವಿಲಾಸ ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಕಾರಂಜಿ ಕೆರೆ, ಲಿಂಗಾಂಬುಧಿ ಕೆರೆಯನ್ನು ಒಂದು ವಾರ ಬಂದ್ ಮಾಡುವ ತೀರ್ಮಾನ ಕೈಗೊಂಡ ನಂತರ ಪ್ರವಾಸಿಗರ ಸಂಖ್ಯೆ ಸಂಪೂರ್ಣ ಕ್ಷೀಣಗೊಂಡಿದೆ. ನಗರದ ಪ್ರವಾಸಿ ತಾಣಗಳ ಜತೆಗೆ ನೆರೆಯ ಕೊಡಗು ಹಾಗೂ ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳು ಸಹ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಸಾಕಷ್ಟು ಇಳಿಮುಖಗೊಂಡಿದೆ.
ಒಂದು ವೇಳೆ ಪ್ರವಾಸಿ ತಾಣಗಳು ಎಂದಿನಂತೆ ತೆರೆದಿದ್ದರೆ ಒಂದಷ್ಟು ಪ್ರವಾಸಿಗರಾದರೂ ನಗರದಲ್ಲಿ ಕಂಡು ಬರುತ್ತಿದ್ದರು. ಆದರೆ ಪ್ರವಾಸಿಗರು ಇಲ್ಲದೆ ಉದ್ಯಮಗಳು ತೀವ್ರ ನಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ವೋಲ್ವೊ ಬಸ್ ಸಂಚಾರ ಸ್ಥಗಿತ: ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸಲು ಜನರು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಮುಖಗೊಂಡಿದೆ. ಪ್ರಯಾಣಿಕರ ಕೊರತೆಯಿಂದ ಅಂತಾರಾಜ್ಯ ನಡುವೆ ಸಂಚರಿಸುತ್ತಿದ್ದ ಸಾಕಷ್ಟು ವೋಲ್ವೊ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ವಿಶೇಷವಾಗಿ ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಕರೊನಾ ವೈರಸ್ ಸೋಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ರಾಜ್ಯಗಳಿಗೆ ತೆರಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಕೇರಳ, ಆಂಧ್ರಪ್ರದೇಶ ನಡುವೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಶೇ.25 ರಿಂದ 30 ರಷ್ಟು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ.