

ಮೈಸೂರು: ಒಂದು ದಶಕದ ನಂತರ ಕುಡಿಯುವ ನೀರಿನ ದರ ಏರಿಕೆ ಮಾಡಲು ಮುಂದಾಗಿದ್ದ ನಗರ ಪಾಲಿಕೆಯು ನಗರದ ನಾಗರಿಕರ ಹಿತದೃಷ್ಟಿಯಿಂದ ದರ ಏರಿಕೆ ನಿರ್ಧಾರ ಕೈ ಬಿಡಲು ಗುರುವಾರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಯಿತು.
ದರ ಏರಿಕೆಗೆ ಆಡಳಿತ ಪಕ್ಷವಾದ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ಷೇಪಗಳು ವ್ಯಕ್ತವಾ ಯಿತು. ಆರಂಭದಲ್ಲಿ ಕಾಂಗ್ರೆಸ್‌ನ ಅಯೂಬ್ ಖಾನ್ ದರ ಏರಿಕೆ ವಿರೋಧಿಸಿದರು. ಇದಕ್ಕೆ ಬಿಜೆಪಿಯ ಬಿ.ವಿ.ಮಂಜುನಾಥ್, ಸುಬ್ಬಯ್ಯ, ಜೆಡಿಎಸ್‌ನ ಎಸ್‌ಬಿಎಂ ಮಂಜು ಧ್ವನಿಗೂಡಿಸಿ ನೀರಿನ ದರ ಏರಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಅನಧಿಕೃತ ನೀರಿನ ಸಂಪರ್ಕಗಳನ್ನು ಸಕ್ರಮಗೊಳಿಸಿದರೆ ಹಾಗೂ ಎಲ್ಲ ಮನೆಗಳಿಗೂ ಮೀಟರ್ ಅಳವಡಿಸಿದರೆ ನೀರು ಪೂರೈಕೆಯಲ್ಲಿ ಆಗುತ್ತಿರುವ ನಷ್ಟ ತಡೆಗಟ್ಟಬಹುದು. ನಗರದಲ್ಲಿ ಕೆಲವರು ನೀರಿನ ಬಿಲ್‌ಅನ್ನು ಪ್ರಾಮಾಣಿಕವಾಗಿ ಪಾವತಿಸುತ್ತಿದ್ದಾರೆ, ಇನ್ನು ಕೆಲವರು ಪಾವತಿಸುತ್ತಿಲ್ಲ. ಪ್ರಾಮಾಣಿಕವಾಗಿ ಬಿಲ್ ಪಾವತಿಸುವವರ ಮೇಲೆ ಮತ್ತೆ ಹೊರೆ ಹೊರಿಸುವುದು ಸರಿಯಲ್ಲ. ಹಾಗಾಗಿ ದರ ಏರಿಕೆ ಕೈ ಬಿಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ನಗರಕ್ಕೆ ಪ್ರತಿನಿತ್ಯ 325 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಆದರೆ, ನಗರಕ್ಕೆ ಅವಶ್ಯಕತೆ ಇರುವುದು ಕೇವಲ 230 ಎಂಎಲ್‌ಡಿ ನೀರು ಮಾತ್ರ. ಉಳಿದ ನೀರು ಎಲ್ಲಿ ಸೋರಿಕೆಯಾಗುತ್ತಿದೆ? ಈ ಸೋರಿಕೆ ತಡೆಗಟ್ಟಿದರೆ ನೀರಿನ ದರ ಏರಿಕೆ ಮಾಡುವ ಅವಶ್ಯಕತೆ ಇಲ್ಲ. ವಾರ್ಡ್‌ವಾರು ಇರುವ ಅಧಿಕೃತ ಹಾಗೂ ಅನಧಿಕೃತ ನೀರಿನ ಸಂಪರ್ಕಗಳು ಹಾಗೂ ವಸೂಲಾತಿಯಾಗುತ್ತಿರುವ ತೆರಿಗೆ ಕುರಿತು ಅಧಿಕಾರಿಗಳು ತಕ್ಷಣ ಮಾಹಿತಿ ನೀಡಬೇಕು. ನೀರಿನ ಸೋರಿಕೆ ತಡೆಗಟ್ಟಲು ವಹಿಸಬೇ ಕಾದ ಕ್ರಮದ ಕುರಿತು 15 ದಿನಗಳ ಒಳಗೆ ಸಭೆ ನಡೆಸಲಾಗುವುದು ಎಂದರು.
ತಾಂತ್ರಿಕ ದೋಷದಿಂದ ನಗರದಲ್ಲಿ ಕೆಲವರಿಗೆ 40 ರಿಂದ 70 ಸಾವಿರ ರೂ.ವರೆಗೆ ನೀರಿನ ಬಿಲ್ ಬಂದಿದ್ದು, ಈ ಕುರಿತು ಪರಿಶೀಲಿಸಿ ಲೋಪದೋಷ ಸರಿಪಡಿಸಬೇಕು ಎಂದು ಬಿಜೆಪಿಯ ಮಾ.ವಿ. ರಾಮಪ್ರಸಾದ್ ಒತ್ತಾಯಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಆಗಿರುವ ತಾಂತ್ರಿಕ ದೋಷ ಪತ್ತೆ ಹಚ್ಚಿ ಸೋಮವಾರದೊಳಗೆ ವರದಿ ನೀಡಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಉಪ ಮೇಯರ್ ಡಾ.ಜಿ. ರೂಪಾ, ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಇದ್ದರು.